ನಾಲ್ಕು ತಿಂಗಳ ಬಾಲೆಯ ಅತ್ಯಾಚಾರ-ಹತ್ಯೆ ಪ್ರಕರಣ: ಅಪರಾಧಿಗೆ ಮರಣ ದಂಡನೆ
ಇಂದೋರ,ಮೇ 12: ಮಧ್ಯಪ್ರದೇಶದಲ್ಲಿ ಕಳೆದ ತಿಂಗಳು ನಡೆದಿದ್ದ ನಾಲ್ಕು ತಿಂಗಳು ಪ್ರಾಯದ ಹೆಣ್ಣುಶಿಶುವಿನ ಅತ್ಯಾಚಾರ-ಹತ್ಯೆ ಪ್ರಕರಣದ ವಿಚಾರಣೆಯನ್ನು ಕೇವಲ 23 ದಿನಗಳಲ್ಲಿ ಪೂರ್ಣಗೊಳಿಸಿರುವ ಇಂದೋರ್ ನ ಸತ್ರ ನ್ಯಾಯಾಲಯವು ಈ ಹೇಯ ಕೃತ್ಯವನ್ನೆಸಗಿದ್ದ ನವೀನ ಗಾಡ್ಕೆ ಎಂಬಾತನನ್ನು ಅಪರಾಧಿ ಎಂದು ಶನಿವಾರ ಘೋಷಿಸಿದ್ದು,ಆತನಿಗೆ ಮರಣ ದಂಡನೆಯನ್ನು ವಿಧಿಸಿದೆ.
ಇದನ್ನು ‘ಅಪರೂಪದಲ್ಲಿಯೇ ಅಪರೂಪದ ಪ್ರಕರಣ’ಎಂದು ಪರಿಗಣಿಸುವಂತೆ ಮತ್ತು ಗಾಡ್ಕೆಗೆ ಮರಣ ದಂಡನೆಯನ್ನು ವಿಧಿಸುವಂತೆ ನ್ಯಾ.ವರ್ಷಾ ಶರ್ಮಾ ಅವರನ್ನು ವಿಶೇಷ ಸರಕಾರಿ ಅಭಿಯೋಜಕ ಅಕ್ರಂ ಶೇಖ್ ಅವರು ಆಗ್ರಹಿಸಿದರು. ಇದೊಂದು ಅಮಾನವೀಯ ಕೃತ್ಯ ಎಂದು ಬಣ್ಣಿಸಿದ ನ್ಯಾ.ಶರ್ಮಾ ಅವರು,ಅಳುವುದೊಂದನ್ನು ಬಿಟ್ಟು ಬೇರೇನೂ ಗೊತ್ತಿಲ್ಲದಿದ್ದ ಅಷ್ಟೊಂದು ಸಣ್ಣಮಗುವಿನೊಂದಿಗೆ ಅತ್ಯಂತ ಅಮಾನುಷವಾಗಿ ನಡೆದುಕೊಳ್ಳಲಾಗಿದೆ ಎಂದರು.
ನ್ಯಾಯಾಧೀಶರು ತೀರ್ಪು ಪ್ರಕಟಿಸಿದ ಬಳಿಕ ಗಾಡ್ಕೆ,ತಾನು ಜೈಲಿಗೆ ಹೋಗುವ ಮುನ್ನ ತನ್ನ ತಾಯಿ ಮತ್ತು ಸೋದರಿಯನ್ನು ನೋಡುವ ಬಯಕೆ ವ್ಯಕ್ತಪಡಿಸಿದ.
ಹೊಟ್ಟೆಪಾಡಿಗಾಗಿ ಬಲೂನುಗಳನ್ನು ಮಾರುತ್ತಿರುವ ಮಗುವಿನ ಹೆತ್ತವರು ಎ.20ರಂದು ರಾತ್ರಿ ಇಂದೋರನ ರಾಜವಾಡಾ ಕೋಟೆಯ ಹೊರಗೆ ರಸ್ತೆಬದಿಯಲ್ಲಿ ಮಲಗಿದ್ದರು. ಸಂಬಂಧದಲ್ಲಿ ಮಗುವಿನ ತಾಯಿಯ ಸೋದರನಾಗಿರುವ ಗಾಡ್ಕೆ ಕೂಡ ಅಲ್ಲಿಯೇ ಮಲಗಿದ್ದ. ಬೆಳಗಿನ ಜಾವ ಮಗುವನ್ನು ಸಮೀಪದ ಕಟ್ಟಡದ ಬಳಿಗೆ ಒಯ್ದಿದ್ದ ಗಾಡ್ಕೆ ಅದರ ಮೇಲೆ ಅತ್ಯಾಚಾರವೆಸಗಿದ್ದ. ಮಗು ಅಳುತ್ತಲೇ ಇದ್ದು,ಅದನ್ನು ಸುಮ್ಮನಾಗಿಸಲು ಕೊಂದೇ ಹಾಕಿದ್ದ.
ಮಗುವಿನ ಶವ ಬೆಳಿಗ್ಗೆ ಪತ್ತೆಯಾಗಿದ್ದು,ಗುಪ್ತಾಂಗ ಮತ್ತು ತಲೆಯಲ್ಲಿ ಗಾಯದ ಗುರುತುಗಳಿದ್ದವು. ಆರೋಪಿಯು ಬಹುಶಃ ಮಗುವನ್ನು ನೆಲಕ್ಕಪ್ಪಳಿಸಿದ್ದ ಎಂದು ಪೊಲೀಸರು ತಿಳಿಸಿದರು.
ಸುಳಿವುಗಳಿಗಾಗಿ ತಡಕಾಡುತ್ತಿದ್ದ ಪೊಲೀಸರು ಸಮೀಪದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಗಾಡ್ಕೆ ಮಗುವನ್ನು ಭುಜದ ಮೇಲೆ ಹೊತ್ತೊಯ್ಯುತ್ತಿದ್ದುದು ಕಂಡು ಬಂದಿತ್ತು.
ಅದೇ ದಿನ ಗಾಡ್ಕೆಯನ್ನು ಬಂಧಿಸಲಾಗಿತ್ತು. ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಕುಪಿತ ಸ್ಥಳೀಯರು ಹಲ್ಲೆ ನಡೆಸಿದ್ದರು. ನ್ಯಾಯಾಲಯದಿಂದ ಹೊರಗೆ ಬರುವಾಗಲೂ ಆತನನ್ನು ಮತ್ತೆ ಚಪ್ಪಲಿಗಳಿಂದ ಥಳಿಸಿದ್ದರು.