ತಾಯಂದಿರ ದಿನದಂದು ತನ್ನ ಹುತಾತ್ಮ ಪುತ್ರನ ಶವಪೆಟ್ಟಿಗೆಗೆ ಹೆಗಲು ಕೊಟ್ಟ ತಾಯಿ
Update: 2018-05-14 15:48 IST
ಚಂಡೀಗಢ,ಮೇ.14 : ದೇಶ ರವಿವಾರ ತಾಯಂದಿರ ದಿನಾಚರಣೆಯ ಸಂಭ್ರಮದಲ್ಲಿದ್ದಾಗ ಪಂಜಾಬ್ ನ ಗುರುದಾಸಪುರದಲ್ಲಿ ಮಹಿಳೆಯೊಬ್ಬಳು ಹುತಾತ್ಮನಾದ ತನ್ನ ಪುತ್ರನ ಶವಪೆಟ್ಟಿಗೆಗೆ ಹೆಗಲು ಕೊಟ್ಟು ತನ್ನ ಪ್ರೀತಿಯ ಪುತ್ರನ ಅಗಲಿಕೆಯ ನೋವನ್ನು ನುಂಗಿಕೊಂಡು ದೇಶಕ್ಕಾಗಿ ಪ್ರಾಣತೆತ್ತ ತನ್ನ ಮಗನ ಮೇಲಿರುವ ತನ್ನ ಅಪಾರ ಹೆಮ್ಮೆಯನ್ನು ತೋರ್ಪಡಿಸಿದ್ದಾರೆ.
ಕುಂತಿ ದೇವಿಯ ಪುತ್ರ ಸಿಆರ್ ಪಿಎಫ್ ಜವಾನ ಮನದೀಪ್ ಕುಮಾರ್ ಜಮ್ಮು ಕಾಶ್ಮಿರದ ಪುಲ್ವಾಮ ಜಿಲ್ಲೆಯಲ್ಲಿನ ಎನ್‍ಕೌಂಟರ್ ಒಂದರಲ್ಲಿ ಮೃತಪಟ್ಟಿದ್ದಾರೆ.
ದೇವಿ ಮತ್ತಾಕೆಯ ದಿವಂಗತ ಪತಿ ನಾನಕ್ ಚಾಂದ್ ಅವರ ಏಕೈಕ ಪುತ್ರನಾಗಿದ್ದ ಮನದೀಪ್ ತನ್ನ ತಾಯಿಯನ್ನು ಅನಾಥೆಯನ್ನಾಗಿಸಿದ್ದಾರೆ. ಮಗನ ಶವಪೆಟ್ಟಿಗೆಗೆ ಹೆಗಲು ಕೊಟ್ಟು ನಡೆಯುತ್ತಿದ್ದಾಗ ಆ ತಾಯಿಯ ಕಣ್ಣೀರು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.
“ನನಗೆ ನೋವಾಗಿದೆ. ಆದರೆ ನನ್ನ ಪುತ್ರ ಈ ದೇಶಕ್ಕೆ ಮಾಡಿದ ಬಲಿದಾನದ ಬಗ್ಗೆ ಹೆಮ್ಮೆ ಪಡುತ್ತೇನೆ,'' ಎಂದು ಅವರು ಹೇಳಿದ್ದಾರೆ.