ಕಾಶ್ಮೀರದಲ್ಲಿ ನರಮೇಧ ಬೆಂಬಲಿಸಿದ್ದ ಪತ್ರಕರ್ತೆಗೆ ಲೋಕಸಭಾ ಟಿವಿಯಲ್ಲಿ ಉದ್ಯೋಗ
ಹೊಸದಿಲ್ಲಿ,ಮೇ.14 : ಕಾಶ್ಮೀರದಲ್ಲಿ ನರಮೇಧವನ್ನು ಒಂದು ಕಾಲದಲ್ಲಿ ಬೆಂಬಲಿಸಿದ್ದ ವಿವಾದಿತ ಪತ್ರಕರ್ತೆ ಜಾಗೃತಿ ಶುಕ್ಲಾರನ್ನು ಕೇಂದ್ರ ಸರಕಾರದ ಅಧೀನದಲ್ಲಿರುವ ಲೋಕಸಭಾ ಟಿವಿಗೆ ನೇಮಕಗೊಳಿಸಲಾಗಿದೆ. ವಾಹಿನಿಯೊಂದರ ಸಹಾಯಕ ನಿರ್ಮಾಪಕಿಯಾಗಿದ್ದ ಆಕೆ 1984ರ ಸಿಖ್ ಹತ್ಯಾಕಾಂಡವನ್ನೂ ಬೆಂಬಲಿಸಿದ್ದರು.
ಟ್ವಿಟ್ಟರ್ ನಲ್ಲಿ ಅವರು ತಮ್ಮನ್ನು ಲೋಕಸಭಾ ಟೀವಿಯ ಕನ್ಸಲ್ಟೆಂಟ್ ಎಂದು ಪರಿಚಯಿಸಿದ್ದರೆ ವಾಹಿನಿಯ ವೆಬ್ ಸೈಟ್ ನಲ್ಲಿ ಸಹಾಯಕ ನಿರ್ಮಾಪಕಿ ಹುದ್ದೆಯಲ್ಲಿ ಆಕೆಯಿದ್ದಾರೆಂದು ನಮೂದಿಸಲಾಗಿದೆ. ಈ ಹುದ್ದೆಗಳಿಗೆ ಸಂದರ್ಶನ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು.
ಈ ಹಿಂದೆ ಝೀ ಟಿವಿ ಹಾಗೂ ನ್ಯೂಸ್ 18ರಲ್ಲೂ ಕರ್ತವ್ಯ ನಿರ್ವಹಿಸಿದ್ದ ಆಕೆ ತನ್ನ ಟ್ವೀಟ್ ಗಳಿಂದ ವಿವಾದಕ್ಕಿಡಾಗಿದ್ದರು. ಕಳೆದ ವರ್ಷ ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಆಕೆಯು ಟ್ವೀಟ್ ಮಾಡಿ "ಗೌರಿ ಲಂಕೇಶ್ ಅವರನ್ನು ನಿರ್ದಯವಾಗಿ ಕೊಲ್ಲಲಾಗಿದೆ. ನಮ್ಮ ಕಾರ್ಯಗಳು ನಮ್ಮನ್ನು ಯಾವತ್ತೂ ಬೆಂಬಿಡುತ್ತವೆ'' ಎಂದು ಬರೆದಿದ್ದರು. ಈ ವರ್ಷ ಆಕೆ ಮುಸ್ಲಿಮರ ವಿರುದ್ಧ ಹಿಂಸೆಗೆ ಪ್ರೇರೇಪಣೆ ನೀಡುವಂತಹ ಟ್ವೀಟ್ ಮಾಡಿದ್ದಾರೆಂದು ಹಲವರು ಆಕ್ಷೇಪಿಸಿದ ನಂತರ ಟ್ವಿಟ್ಟರ್ ಆಕೆಯ ಖಾತೆಯನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸಿತ್ತು.
"ಅವರು ನಮ್ಮನ್ನು ರೈಲುಗಳಲ್ಲಿ ಕೊಂದಿದ್ದಾರೆ, ನಮ್ಮ ವಿಮಾನಗಳನ್ನು ಅಪಹರಿಸಿದ್ದಾರೆ, ನಮ್ಮನ್ನು ಹೋಟೆಲುಗಳಲ್ಲಿ ಒತ್ತೆಯಿರಿಸಿದ್ದರು ಹಾಗೂ ಈಗ ತ್ರಿವರ್ಣವನ್ನು ಹಿಡಿದಿದ್ದಕ್ಕಾಗಿ ಕೊಲ್ಲುತ್ತಿದ್ದಾರೆ. ನಾವು ಭಯದಿಂದ ಜೀವಿಸುತ್ತಿದ್ದೇವೆ ಅವರಲ್ಲ. ಯಾವತ್ತೂ ಮಾರಣಾಂತಿಕ ಆಯುಧಗಳನ್ನು ಒಯ್ಯಿರಿ. ಅವರು ನಮ್ಮನ್ನು ಕೊಲ್ಲುವುದಕ್ಕಿಂತ ಮುಂಚೆ ಅವರನ್ನು ಕೊಲ್ಲಿ'' ಎಂದು ಆಕೆ ಟ್ವೀಟ್ ಮಾಡಿದ್ದರು.
ಆಕೆಯ ನೇಮಕಾತಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಲೋಕಸಭಾ ಟಿವಿ ಸಂಪಾದಕ ಶ್ಯಾಮ್ ಕಿಶೋರ್ ತಾವು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಕಾಶ್ಮೀರಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ತನ್ನ ಉದ್ಯೋಗಿ ಆಶಿಶ್ ಕೌಲ್ ಎಂಬ ಕಾಶ್ಮೀರಿ ಪಂಡಿತ ಯುವಕನನ್ನು ಆತ ಕೆಲಸ ಮಾಡುವ ಅಮೆರಿಕಾ ಮೂಲದ ಕನ್ಸಲ್ಟೆನ್ಸಿ ಸಂಸ್ಥೆ ಸೇವೆಯಿಂದ ವಜಾಗೊಳಿಸಿತ್ತಲ್ಲದೆ ಜಮ್ಮು ಮತ್ತು ಕಾಶ್ಮಿರ ಪೊಲೀಸರು ಆತನ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.