ಕರ್ನಾಟಕ ಚುನಾವಣಾ ರ್‍ಯಾಲಿಗಳಲ್ಲಿ ಮೋದಿ ಭಾಷಣ ವೈಖರಿಯನ್ನು ಪ್ರಶ್ನಿಸಿ ರಾಷ್ಟ್ರಪತಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕರು

Update: 2018-05-14 13:08 GMT

ಹೊಸದಿಲ್ಲಿ,ಮೇ.14: ಕಾಂಗ್ರೆಸ್ ಪಕ್ಷದ ನಾಯಕರನ್ನು ಬೆದರಿಸುವಂತಹ ಹಾಗೂ ಸಾರ್ವಜನಿಕವಾಗಿ ಅವರಿಗೆ ಎಚ್ಚರಿಕೆ ನೀಡುವಂತಹ ಮಾತುಗಳನ್ನು ಆಡದಂತೆ ಪ್ರಧಾನಿ ನರೇಂದ್ರ  ಮೋದಿ ಅವರಿಗೆ ಎಚ್ಚರಿಕೆ ನೀಡಬೇಕೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ಹಲವು ಹಿರಿಯ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ಮೇ 13ರಂದು ಬರೆಯಲಾಗಿರುವ ಈ ಪತ್ರಕ್ಕೆ ಸಿಂಗ್ ಹೊರತಾಗಿ ಪಿ ಚಿದಂಬರಂ, ಆನಂದ್ ಶರ್ಮ, ಕರಣ್ ಸಿಂಗ್ ಮತ್ತಿತರರು ಸಹಿ ಹಾಕಿದ್ದಾರೆ. ಮೇ 6ರಂದು ಕರ್ನಾಟಕದ ಹುಬ್ಬಳ್ಳಿಯಲ್ಲಿನ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಭಾಷಣದ ವೀಡಿಯೋಗೆ ಸಂಬಂಧಿಸಿದಂತೆ ಅವರು ಈ ಪತ್ರ ಬರೆಯಲಾಗಿದೆ.

"ಸಾರ್ವಜನಿಕ ಘನತೆಯ ಎಲ್ಲೆ ದಾಟಬಾರದು,  ಇಲ್ಲವೇ ಅದಕ್ಕೆ ಬೆಲೆ ತೆರಬೇಕಾದೀತು,'' ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯ ಗಾಂಧಿಯನ್ನು ಎಚ್ಚರಿಸಿದ್ದರು. ಮೋದಿ ತಮ್ಮ ಭಾಷಣದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೇ ಇದ್ದರೂ `ಕಾಂಗ್ರೆಸ್  ಮಾ  ಮತ್ತವರ ಪುತ್ರ ಎಂದು ಹೇಳಿರುವುದು ರಾಹುಲ್ ಮತ್ತು ಸೋನಿಯಾ ಅವರನ್ನು  ಉಲ್ಲೇಖಿಸಿಯೇ ಎಂಬುದು ಸ್ಪಷ್ಟ.

ಈ ಹಿಂದೆ ಎಲ್ಲಾ ಪ್ರಧಾನಿಗಳೂ ಸಾರ್ವಜನಿಕ ಯಾ ಖಾಸಗಿ ಸಮಾರಂಭಗಳಲ್ಲಿನ ತಮ್ಮ ಭಾಷಣಗಳಲ್ಲಿ ಘನತೆಯನ್ನು ಕಾಪಾಡಿಕೊಂಡಿದ್ದರು. ಆದರೆ ಈಗಿನ ಪ್ರಧಾನಿ ಕಾಂಗ್ರೆಸ್ ನಾಯಕತ್ವಕ್ಕೆ  ಮಾಡಿರುವ ಬೆದರಿಕೆಯನ್ನು ಖಂಡಿಸಬೇಕಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

"ಸಾಂವಿಧಾನಿಕವಾಗಿ ಚುನಾಯಿತರಾದ ದೇಶವೊಂದರ ಪ್ರಧಾನಿಯ ಬಾಯಿಯಿಂದ ಬರುವಂತಹ ಮಾತುಗಳು ಇವಲ್ಲ. ಇದು ಸ್ವೀಕಾರಾರ್ಹವಲ್ಲ. ಅದು ಶಾಂತಿಯನ್ನು ಕದಡುವಂತಹ ಹಾಗೂ ಅವಮಾನ ಮಾಡುವಂತಹ ಮಾತುಗಳು. ಇಂತಹ ಬೆದರಿಕೆಗಳಿಂದ ನಮ್ಮ  ಪಕ್ಷ ಅಥವಾ ಅದರ ನಾಯಕರು ಬಗ್ಗುವುದಿಲ್ಲ, ಇಂತಹ ಮಾತುಗಳು ಪ್ರಧಾನಿ ಹುದ್ದೆಯನ್ನು ಅವರು ವೈಯಕ್ತಿಕ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆಂಬುದು ಸ್ಪಷ್ಟ,'' ಎಂದು ಪತ್ರದಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News