ಔರಂಗಾಬಾದ್ ಹಿಂಸಾಚಾರ ಯೋಜಿತ ಕೃತ್ಯ : ಪೊಲೀಸರ ಶಂಕೆ

Update: 2018-05-14 18:03 GMT

ಮುಂಬೈ, ಮೇ 14: ಕಳೆದ ಶುಕ್ರವಾರ ಮುಂಬೈ ಪೂರ್ವದ ನಗರ ಔರಂಗಾಬಾದ್‌ನಲ್ಲಿ ಸಂಭವಿಸಿದ ಹಿಂಸಾಚಾರ ಘಟನೆ ಪೂರ್ವ ಯೋಜಿತ ಕೃತ್ಯವಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗಲಭೆಕೋರರು ಖಡ್ಗ, ಪಿಸ್ತೂಲ್, ಪೆಟ್ರೋಲ್ ಬಾಂಬ್, ಆ್ಯಸಿಡ್ ಹಾಗೂ ಸೀಮೆ ಎಣ್ಣೆ ತುಂಬಿಸಿದ್ದ ಬಾಟಲಿಗಳನ್ನು ಹೊಂದಿದ್ದು ವ್ಯವಸ್ಥಿತ ಹಾಗೂ ಕ್ರಮಬದ್ಧವಾಗಿ ದುಷ್ಕೃತ್ಯಗಳನ್ನು ನಡೆಸಲಾಗಿದೆ. ಪೊಲೀಸ್ ತಂಡವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಆದರೆ ಈ ಘಟನೆ ಯೋಜಿತ ಕೃತ್ಯವಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಔರಂಗಾಬಾದ್ ವಲಯ 1ರ ಪೊಲೀಸ್ ಉಪಾಯುಕ್ತ ವಿನಾಯಕ್ ಧಕ್ನೆ ತಿಳಿಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ಹಾಗೂ ಶನಿವಾರ ಔರಂಗಾಬಾದ್‌ನಲ್ಲಿ ಲೂಟಿ, ಬೆಂಕಿ ಹಚ್ಚುವುದು, ಕಲ್ಲೆಸೆತದ ಘಟನೆಯಿಂದ ಇಬ್ಬರು ಮೃತಪಟ್ಟಿದ್ದರು.ಆಕ್ರೋಶಿತ ಗುಂಪೊಂದು ಬೀದಿಗಿಳಿದ ಕೆಲವೇ ಕ್ಷಣಗಳಲ್ಲಿ ಗುಂಪಿನಲ್ಲಿದ್ದವರಿಗೆ ಆಯುಧಗಳು ಕ್ಷಣ ಮಾತ್ರದಲ್ಲಿ ಪೂರೈಕೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಧಾರರಹಿತ ಗಾಳಿಸುದ್ದಿ ಹಬ್ಬಿಸುವುದನ್ನು ತಡೆಯಲು ಸ್ಥಳೀಯ ಆಡಳಿತವು ಇಂಟರ್‌ನೆಟ್ ವ್ಯವಸ್ಥೆಯನ್ನು ತಡೆಹಿಡಿದಿತ್ತು. ಹಿಂಸಾಚಾರ ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ಸಾಮಾಜಿಕ ಕಾರ್ಯಕರ್ತೆ ಹಾಗೂ ಸ್ಥಳೀಯ ನಿವಾಸಿ ಚಂದಾ ರಾಜ್‌ಪುತ್ ಗಲಭೆಗ್ರಸ್ತ ಪ್ರದೇಶಗಳಿಂದ ಮಹಿಳೆಯರು ಮತ್ತು ಮಕ್ಕಳನ್ನು ಪಾರುಮಾಡಲು ಶ್ರಮಿಸಿದ್ದರು.

ನೂರಾರು ಜನರು ನಮ್ಮೆಡೆಗೆ ಧಾವಿಸಿ ಬರುತ್ತಿದ್ದರು. ಕ್ಷಣಮಾತ್ರದಲ್ಲಿ ನಮ್ಮ ಮನೆಯ ಮೇಲೆ ಆ್ಯಸಿಡ್ ಮತ್ತು ಪೆಟ್ರೋಲ್ ಬಾಂಬ್ ಎಸೆದರು. ಅಲ್ಲದೆ ಮನೆಯ ಕಿಟಕಿಗಳನ್ನು ಮುರಿದು ಬೆಂಕಿಯ ಉಂಡೆಗಳನ್ನು ಮನೆಯೊಳಗೆ ಉಡಾಯಿಸಿದರು. ಅವರ ಬಳಿ ಖಡ್ಗ ಹಾಗೂ ಕಲ್ಲುಗಳಿಂದ ತುಂಬಿದ್ದ ಬ್ಯಾಗು ಇತ್ತು. ಇದರ ಜೊತೆಗೆ, ಸಮೀಪದ ಮನೆಯ ಛಾವಣಿಯ ಮೇಲೆ ನಿಂತಿದ್ದವರು ನಮ್ಮತ್ತ ಇಟ್ಟಿಗೆಗಳನ್ನು ಎಸೆಯುತ್ತಿದ್ದರು . ಕೆಲವರ ಬಳಿ ಸ್ಥಳೀಯ ನಿರ್ಮಿತ ಪಿಸ್ತೂಲ್‌ಗಳಿದ್ದವು. ಇದೆಲ್ಲಾ ಗಮನಿಸಿದರೆ ಅವರು ಸಂಪೂರ್ಣ ಸಜ್ಜಾಗಿದ್ದರು ಎಂದು ಚಂದಾ ರಜಪೂತ್ ವಿವರಿಸಿದ್ದಾರೆ.

ಕಳೆದ ಬುಧವಾರ , ಒಂದು ಸಮುದಾಯದವರೇ ಹೆಚ್ಚಿರುವ ಶಹಾಗಂಜ್ ಪ್ರದೇಶದಲ್ಲಿ ಮಾವಿನ ಹಣ್ಣಿನ ಬೆಲೆಯ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿಯ ಬಳಿಕ ಉದ್ರಿಕ್ತ ಗುಂಪೊಂದು ಹಲವು ಹಣ್ಣಿನ ಅಂಗಡಿಗಳಿಗೆ ಹಾನಿ ಎಸಗಿತ್ತು. ಇನ್ನೊಂದು ಘಟನೆಯಲ್ಲಿ ಗ್ಯಾರೇಜ್ ಮಾಲಕನೋರ್ವನ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಶಹಾಗಂಜ್ ಪ್ರದೇಶದಲ್ಲಿ 45ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು ಕಳೆದ ಎರಡು ವಾರಗಳಿಂದ ಕೋಮು ಬೆದರಿಕೆಗೆ ಒಳಗಾಗಿದ್ದೇವೆ ಎಂದು ಈ ಪ್ರದೇಶದ ಜನತೆ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ನಗರದ ಪೊಲೀಸ್ ಆಯುಕ್ತ ಮಿಲಿಂದ್ ಭರಾಂಬೆಯವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಇಲ್ಲಿಯ ಅಂಗಡಿಗಳನ್ನು ಲೀಸ್‌ಗೆ ಪಡೆಯಲಾಗಿದ್ದು ಲೀಸ್‌ನ ಅವಧಿ ಮುಗಿದಿದ್ದರೂ ವ್ಯಾಪಾರ ಮುಂದುವರಿಸುವಂತೆ ನ್ಯಾಯಾಲಯದಿಂದ ಆದೇಶ ಪಡೆದಿರುವುದಾಗಿ ಅಂಗಡಿ ಮಾಲಿಕರು ಹೇಳಿದ್ದಾರೆ. ನಗರಪಾಲಿಕೆಗೆ ಸಂಬಂಧಿಸಿದ ವಿಷಯ ಇದಾಗಿದೆ. ಅಲ್ಲದೆ ರಮಝಾನ್ ತಿಂಗಳಿನಲ್ಲಿ ಮೀನಾ ಬಝಾರ್ ಆಯೋಜಿಸುವ ಕುರಿತು ಅಧಿಕಾರಿಗಳ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಬಳಿಕ ಈ ಪ್ರದೇಶದಲ್ಲಿ ಉದ್ವೇಗದ ಪರಿಸ್ಥಿತಿ ನೆಲೆಸಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆಗೆ ಡಿಜಿಪಿ ಆದೇಶ

ಕಳೆದ ವಾರ ಔರಂಗಾಬಾದ್‌ನಲ್ಲಿ ಸಂಭವಿಸಿದ ಹಿಂಸಾಚಾರ ಘಟನೆಯಲ್ಲಿ ಗಲಭೆಕೋರರ ವಿರುದ್ಧ ಪೊಲೀಸರು ಮೃದು ಧೋರಣೆ ವಹಿಸಿ ಅವರಿಗೆ ಮುಕ್ತ ಅವಕಾಶ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಪೊಲೀಸ್ ಇಲಾಖೆ ಆದೇಶಿಸಿದೆ. ಔರಂಗಾಬಾದ್ ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದ ಕೋಮು ಹಿಂಸಾಚಾರ ಘಟನೆಯಲ್ಲಿ ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಲವು ವಾಹನ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈಗ ನಗರದಲ್ಲಿ ಪರಿಸ್ಥಿತಿ ಸಹಜತೆಗೆ ಮರಳಿದ್ದರೂ ಹಿಂಸಾಚಾರ ಸ್ಫೋಟಗೊಂಡಿದ್ದ ಸ್ಥಳದಲ್ಲಿ ಕರ್ಫ್ಯೂ ಮುಂದುವರಿದಿದೆ. ದುಷ್ಕರ್ಮಿಗಳು ಗಲಭೆಯಲ್ಲಿ ತೊಡಗಿದ್ದರೂ ಪೊಲೀಸರು ಕಂಡೂ ಕಾಣದವರಂತೆ ವರ್ತಿಸುತ್ತಿರುವ ದೃಶ್ಯವನ್ನು ಒಳಗೊಂಡಿರುವ 7 ನಿಮಿಷದ ವೀಡಿಯೊ ಪ್ರಸಾರವಾದ ಹಿನ್ನೆಲೆಯಲ್ಲಿ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ ಸತೀಶ್ ಮಾಥುರ್ ತಿಳಿಸಿದ್ದಾರೆ.

ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನೆರೆಯ ಪಟ್ಟಣಗಳಿಂದ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ . ವಿಭಿನ್ನ ಸಮುದಾಯದ ಜನತೆಯನ್ನು ಒಗ್ಗೂಡಿಸಿ ಶಾಂತ ಸ್ಥಿತಿ ನೆಲೆಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಜನತೆಗೆ ಮನವಿ ಮಾಡಿಕೊಂಡಿರುವ ಮುಖ್ಯಮಂತ್ರಿ, ಹಿಂಸಾಚಾರ ಆರಂಭಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯ ಸರಕಾರದ ವೈಫಲ್ಯ

ಶಿವಸೇನೆ ಟೀಕೆ ಔರಂಗಾಬಾದ್ ಹಿಂಸಾಚಾರಕ್ಕೆ ಭದ್ರತಾ ವ್ಯವಸ್ಥೆಯಲ್ಲಾದ ಲೋಪ ಕಾರಣ ಎಂದು ಶಿವಸೇನೆ ಹೇಳಿದ್ದು, ಅತೀ ಸೂಕ್ಷ್ಮ ಪ್ರದೇಶವಾಗಿರುವ ನಗರಕ್ಕೆ ಪೊಲೀಸ್ ಆಯುಕ್ತರನ್ನು ನೇಮಿಸದ ಸರಕಾರದ ವಿರುದ್ಧ ಹರಿಹಾಯ್ದಿದೆ. ಮುಖ್ಯಮಂತ್ರಿ ಫಡ್ನವೀಸ್ ನೇತೃತ್ವದ ಗೃಹ ಇಲಾಖೆಯ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದೆ. ಬಹುಷಃ ಬಿಜೆಪಿ ಪರವಾಗಿರುವ ಐಪಿಎಸ್ ಅಧಿಕಾರಿಯನ್ನು ಔರಂಗಾಬಾದ್‌ಗೆ ನೇಮಿಸಲು ಸರಕಾರ ಬಯಸಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

ಪಕ್ಷದ ಮುಖವಾಣಿ ‘ಸಾಮ್ನ’ದಲ್ಲಿ ಬರೆದಿರುವ ಸಂಪಾದಕೀಯ ಬರಹದಲ್ಲಿ ಗಲಭೆ ಪೂರ್ವನಿಯೋಜಿತವಾಗಿದೆ. ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆ ಇದು ಎಂದು ಬಿಂಬಿಸಲು ಪ್ರಯತ್ನ ನಡೆಸುತ್ತಿರುವುದು ಖಂಡನೀಯ. ಇದು ಕೋಮುಗಲಭೆ ಎಂದು ತಿಳಿಸಲಾಗಿದೆ.

ಅಕ್ರಮ ನೀರಿನ ಸಂಪರ್ಕವನ್ನು ನಗರಪಾಲಿಕೆ ಕಿತ್ತುಹಾಕಲು ಮುಂದಾದ ಸಂದರ್ಭ ನಡೆದ ತಿಕ್ಕಾಟ, ಗ್ಯಾರೇಜ್‌ನಲ್ಲಿ ಮೊಬೈಲ್ ಫೋನ್‌ನ ವಿಷಯದಲ್ಲಿ ಉಂಟಾದ ಮಾತಿನ ಚಕಮಕಿ, ಅಕ್ರಮ ಪಾನ್ ಅಂಗಡಿಗಳನ್ನು ಎತ್ತಂಗಡಿ ಮಾಡುವ ಸಂದರ್ಭ ನಡೆದ ಘರ್ಷಣೆ, ಹಾಳಾದ ಮಾವಿನ ಹಣ್ಣನ್ನು ಅಂಗಡಿಯಲ್ಲಿ ಮಾರಿರುವುದು- ಇತ್ಯಾದಿ ಕಾರಣವನ್ನು ನೀಡಲಾಗುತ್ತಿದೆ. ಆದರೆ ಇದೆಲ್ಲಾ ಸತ್ಯವನ್ನು ಮರೆಮಾಚುವ ಪ್ರಯತ್ನ. ಭದ್ರತಾ ವ್ಯವಸ್ಥೆ ಕುಸಿದು ಬಿದ್ದಿರುವುದನ್ನು ಈ ಘಟನೆ ತೋರಿಸುತ್ತದೆ ಎಂದು ‘ಸಾಮ್ನ’ ತಿಳಿಸಿದೆ.

ಕೋರೆಗಾಂವ್- ಭೀಮಾ ಹಿಂಸಾಚಾರದ ಕಾರಣ ಈಗಾಗಲೇ ಮಹಾರಾಷ್ಟ್ರದ ಪ್ರತಿಷ್ಠೆಗೆ ಹಾನಿಯಾಗಿದೆ. ಅಲ್ಲದೆ ಅಹ್ಮದ್‌ನಗರದಲ್ಲಿ ಅವಳಿ ಕೊಲೆಯ ಎರಡು ಪ್ರಮುಖ ಘಟನೆ ನಡೆದಿದೆ. ಆದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮುಖ್ಯಮಂತ್ರಿ ಹೇಳುತ್ತಿರುವುದು ಹಾಸ್ಯಾಸ್ಪವಾಗಿದೆ. ಸಂಪೂರ್ಣ ಶಹಗಂಜ್

ಪೇಟೆಗೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ನೂರಾರು ಮನೆಗಳು ಹಾಗೂ ವಾಹನಗಳಿಗೆ ಹಾನಿಯಾಗಿವೆ. ಇಬ್ಬರು ಮೃತಪಟ್ಟಿದ್ದಾರೆ. ಇದೆಲ್ಲಾ ಗಮನಿಸಿದರೆ ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News