ಕರ್ತವ್ಯದ ಕೊನೆಯ ದಿನ ಸಿಜೆಐ ಜತೆ ವೇದಿಕೆ ಹಂಚಿಕೊಂಡ ಜಸ್ಟಿಸ್ ಚೆಲಮೇಶ್ವರ್

Update: 2018-05-18 12:24 GMT

ಹೊಸದಿಲ್ಲಿ, ಮೇ 18: ಜನವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದ ನಾಲ್ಕು ಮಂದಿ ಹಿರಿಯ ನ್ಯಾಯಾಧೀಶರುಗಳ ಪೈಕಿ ಒಬ್ಬರಾಗಿದ್ದ ಜಸ್ಟಿಸ್ ಜಸ್ತಿ ಚೆಲಮೇಶ್ವರ್ ಅವರು ತಮ್ಮ ಕೊನೆಯ ಕರ್ತವ್ಯ ದಿನವಾದ ಇಂದು  ಮುಖ್ಯ ನ್ಯಾಯಮೂರ್ತಿಗಳ ಜತೆ ವೇದಿಕೆ ಹಂಚಿಕೊಂಡಿದ್ದಾರೆ.

ಜಸ್ಟಿಸ್ ಚೆಲಮೇಶ್ವರ್ ಅವರು ಜೂನ್ 22ರಂದು ನಿವೃತ್ತರಾಗಲಿದ್ದಾರಾದರೂ ಬೇಸಿಗೆ ರಜೆಗಿಂತ ಮೊದಲು ಇಂದು ಕೊನೆಯ ಕರ್ತವ್ಯದ ದಿನವಾಗಿರುವುದರಿಂದ ಚೆಲಮೇಶ್ವರ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠದಲ್ಲಿ ಜಸ್ಟಿಸ್ ಡಿ ವೈ ಚಂದ್ರಚೂಡ್ ಜತೆಗಿದ್ದರು. ನಿವೃತ್ತರಾಗುವ ನ್ಯಾಯಾಧೀಶರೊಬ್ಬರು ತಮ್ಮ ಕರ್ತವ್ಯದ ಕೊನೆಯ ದಿನದಂದು ಕೋರ್ಟ್ ನಂ. 1ರಲ್ಲಿ ಸಿಜೆಐ ಜತೆ ಕುಳಿತುಕೊಳ್ಳುವ ಗೌರವಕ್ಕೆ ಪಾತ್ರರಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಜಸ್ಟಿಸ್ ಚೆಲಮೇಶ್ವರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಜತೆ ಭಿನ್ನಾಭಿಪ್ರಾಯಗಳಿರುವುದರಿಂದ ಅವರು ಇಂದು ಅವರ ಜತೆ ಪೀಠದಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ಅಂದಾಜಿಸಲಾಗಿದ್ದರೂ ಹಾಗಾಗಿಲ್ಲ.

ಇಂದು ಕೋರ್ಟ್ ನಂ. 1ರಲ್ಲಿ ಯಾವುದೇ ಪ್ರಕರಣವಿಲ್ಲದೇ ಇದ್ದುದರಿಂದ ಅವರು ಸಲ್ಪ ಜೊತ್ತು ಕುಳಿತು 11:15ರ ಹೊತ್ತಿಗೆ ಹೊರ ನಡೆದರು. ಹಿರಿಯ ವಕೀಲ ರಾಜೀವ್ ದತ್ತಾ ಹಾಗೂ ವಕೀಲರುಗಳಾದ ಪ್ರಶಾಂತ್ ಭೂಷಣ್ ಹಾಗೂ ಗೋಪಾಲ್ ಶಂಕರನಾರಾಯಣನ್ ಅವರು ಜಸ್ಟಿಸ್ ಚೆಲಮೇಶ್ವರ್ ಅವರಿಗೆ ವಿದಾಯ ಭಾಷಣ ಮಾಡಿ ಪ್ರಜಾಪ್ರಭುತ್ವವನ್ನು ಹಾಗೂ ಸಂವಿಧಾನವನ್ನು ಎತ್ತಿ  ಹಿಡಿದಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು.

ನಂತರ ಜಸ್ಟಿಸ್ ಚೆಲಮೇಶ್ವರ್ ಅವರು ಕರ ಮುಗಿದು ಕೋರ್ಟ್ ರೂಮಿನಿಂದ ಹೊರ ನಡೆದರು. ಈ ಹಿಂದೆ ವೈಯಕ್ತಿಕ ಕಾರಣಗಳಿಗಾಗಿ  ಜಸ್ಟಿಸ್ ಚೆಲಮೇಶ್ವರ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ತನಗಾಗಿ ಆಯೋಜಿಸಲಿದ್ದ ವಿದಾಯ ಸಮಾರಂಭಕ್ಕೆ ಆಹ್ವಾನ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News