ಕೇಂದ್ರೀಯ ಸೇವೆಗಳಲ್ಲಿ ಆರೆಸ್ಸೆಸ್ ಆಯ್ಕೆಯ ಅಧಿಕಾರಿಗಳ ನೇಮಕಕ್ಕೆ ಪ್ರಧಾನಿ ಹುನ್ನಾರ: ರಾಹುಲ್ ಗಾಂಧಿ ಆರೋಪ

Update: 2018-05-22 15:06 GMT

ಹೊಸದಿಲ್ಲಿ,ಮೆ 22: ನಾಗರಿಕ ಸೇವೆ ಪರೀಕ್ಷೆಗಳಲ್ಲಿನ ಮೆರಿಟ್ ಲಿಸ್ಟ್‌ನ್ನು ತಿರುಚುವ ಮೂಲಕ ಆರೆಸ್ಸೆಸ್ ಆಯ್ಕೆ ಮಾಡಿದ ಅಧಿಕಾರಿಗಳನ್ನು ನೇಮಕಗೊಳಿಸಲು ಪ್ರಧಾನ ಮಂತ್ರಿಗಳು ಬಯಸಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯವು ಅಪಾಯದಲ್ಲಿದೆ ಎಂದು ಮಂಗಳವಾರ ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,‘ಎದ್ದೇಳುವಂತೆ’ ವಿದ್ಯಾರ್ಥಿಗಳನ್ನು ಆಗ್ರಹಿಸಿದ್ದಾರೆ.

ಅಖಿಲ ಭಾರತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ಸೇವೆಗಳ ಹಂಚಿಕೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಬಯಸಿರುವ ಪ್ರಸ್ತಾಪವೊಂದರ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ರಾಹುಲ್‌ರ ಈ ಸಂದೇಶ ಹೊರಬಿದ್ದಿದೆ.

‘‘ಎದ್ದೇಳಿ ವಿದ್ಯಾರ್ಥಿಗಳೇ,ನಿಮ್ಮ ಭವಿಷ್ಯವು ಅಪಾಯದಲ್ಲಿದೆ. ನ್ಯಾಯವಾಗಿ ನಿಮಗೆ ಸೇರಿದ್ದನ್ನು ಆರೆಸ್ಸೆಸ್ ಕೇಳುತ್ತಿದೆ. ಪರೀಕ್ಷೆಯಲ್ಲಿನ ರ್ಯಾಂಕಿಂಗ್‌ಗಳ ಬದಲಿಗೆ ವ್ಯಕ್ತಿಗತ ಮಾನದಂಡಗಳನ್ನು ಬಳಸಿ ಮೆರಿಟ್ ಲಿಸ್ಟ್‌ನಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಕೇಂದ್ರೀಯ ಸೇವೆಗಳಲ್ಲಿ ಆರೆಸ್ಸೆಸ್ ಆಯ್ಕೆಯ ಅಧಿಕಾರಿಗಳನ್ನು ನೇಮಕಗೊಳಿಸುವ ಪ್ರಧಾನಿಗಳ ಹುನ್ನಾರವನ್ನು ಕೆಳಗಿನ ಪತ್ರವು ಬಹಿರಂಗಗೊಳಿಸಿದೆ’ ಎಂದು ‘ಬೈ ಬೈ ಯುಪಿಎಸ್‌ಸಿ’ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟಿಸಿರುವ ರಾಹುಲ್,ಈ ಸಂಬಂಧ ಪ್ರಧಾನಿ ಕಚೇರಿಯ ಪ್ರಸ್ತಾವವೊಂದರ ಕುರಿತು ಸಿಬ್ಬಂದಿ ಸಚಿವಾಲಯದ ಪತ್ರದ ಪ್ರತಿಯನ್ನು ಲಗತ್ತಿಸಿದ್ದಾರೆ.

ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಪ್ರೊಬೇಷನರ್‌ಗಳಿಗೆ ಬುನಾದಿ ಕೋರ್ಸ್‌ನ ಬಳಿಕ ಅದರ ಅಂಕಗಳನ್ನೂ ಸೇರಿಸಿ ಒಟ್ಟು ಅಂಕಗಳ ಆಧಾರದಲ್ಲಿ ಸೇವೆ/ಕೇಡರ್‌ಗಳನ್ನು ಹಂಚಿಕೆ ಮಾಡುವ ಸಲಹೆಯನ್ನು ಪರಿಶೀಲಿಸಲು ಪ್ರಧಾನಿ ಕಚೇರಿಯು ಬಯಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News