ಎಲಿಮಿನೇಟರ್: ಕೋಲ್ಕತಾಕ್ಕೆ ಮತ್ತೊಂದು ಅವಕಾಶ, ರಾಜಸ್ಥಾನ್ ರಾಯಲ್ಸ್ ಮನೆಗೆ

Update: 2018-05-23 17:29 GMT

ಕೋಲ್ಕತಾ, ಮೇ 23: ಸಂಜು ಸ್ಯಾಮ್ಸನ್(50) ಹಾಗೂ ನಾಯಕ ಅಜಿಂಕ್ಯ ರಹಾನೆ(46) ಪ್ರಯತ್ನದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ 25 ರನ್‌ಗಳಿಂದ ಸೋಲುಂಡಿದೆ.

 ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 170 ರನ್ ಸವಾಲು ಪಡೆದಿದ್ದ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ರಾಜಸ್ಥಾನ ಟೂರ್ನಿಯಿಂದ ಹೊರ ನಡೆದರೆ ಕೆಕೆಆರ್ ತಂಡ ಫೈನಲ್‌ಗೆ ಪ್ರವೇಶಿಸಲು ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದೆ. ಕೋಲ್ಕತಾದಲ್ಲೇ ಮೇ 25 ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಪ್ರವೇಶಿಸಲಿದ್ದು, ಮೇ 27 ರಂದು ಮುಂಬೈನಲ್ಲಿ ನಡೆಯುವ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಸೆಣಸಾಡಲಿದೆ.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ರಾಜಸ್ಥಾನಕ್ಕೆ ರಹಾನೆ(46, 41 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ರಾಹುಲ್ ತ್ರಿಪಾಠಿ(20,13 ಎಸೆತ, 1 ಬೌಂಡರಿ, 2 ಸಿಕ್ಸರ್)ಮೊದಲ ವಿಕೆಟ್‌ಗೆ 47 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ತ್ರಿಪಾಠಿ ಔಟಾದ ಬಳಿಕ ಸ್ಯಾಮ್ಸನ್‌ರೊಂದಿಗೆ(50, 38 ಎಸೆತ, 4 ಬೌಂಡರಿ, 2 ಸಿಕ್ಸರ್)2ನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದ ರಹಾನೆ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು.

15ನೇ ಓವರ್‌ನಲ್ಲಿ ರಹಾನೆ ಔಟಾಗುವುದರೊಂದಿಗೆ ರಾಜಸ್ಥಾನ ಹೋರಾಟಕ್ಕೆ ಹಿನ್ನಡೆಯಾಯಿತು. ಸ್ಯಾಮ್ಸನ್ ಬರೋಬ್ಬರಿ 50 ರನ್ ಗಳಿಸಿ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ಕ್ಲಾಸನ್(ಔಟಾಗದೆ 18) ಹಾಗೂ ಕೆ.ಗೌತಮ್(ಔಟಾಗದೆ 9)5ನೇ ವಿಕೆಟ್‌ಗೆ 14 ರನ್ ಸೇರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಕೆಕೆಆರ್ ಪರವಾಗಿ ಪಿಯೂಷ್ ಚಾವ್ಲಾ(2-24) ಎರಡು ವಿಕೆಟ್ ಕಬಳಿಸಿದ್ದಾರೆ. ಕುಲ್‌ದೀಪ್ ಯಾದವ್(1-18) ಹಾಗೂ ಪ್ರಸಿದ್ಧ ಕೃಷ್ಣ(1-28) ತಲಾ ಒಂದು ವಿಕೆಟ್ ಕಬಳಿಸಿದರು.

ಕೋಲ್ಕತಾ 169/7: ಇದಕ್ಕೆ ಮೊದಲು ನಾಯಕ ದಿನೇಶ್ ಕಾರ್ತಿಕ್(52 ರನ್, 38 ಎಸೆತ) ಹಾಗೂ ಆಲ್‌ರೌಂಡರ್ ರಸ್ಸಲ್(ಔಟಾಗದೆ 49,25 ಎಸೆತ) ಸಾಹಸದ ನೆರವಿನಿಂದ ಕೋಲ್ಕತಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ಇಲ್ಲಿನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ರಾಜಸ್ಥಾನ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಇನಿಂಗ್ಸ್‌ನ 2ನೇ ಎಸೆತದಲ್ಲಿ ಸುನೀಲ್ ನರೇನ್(4) ವಿಕೆಟ್‌ನ್ನು ಕಳೆದುಕೊಂಡ ಕೋಲ್ಕತಾ ಕಳಪೆ ಆರಂಭ ಪಡೆಯಿತು. ಕೃಷ್ಣಪ್ಪ ಗೌತಮ್ (2-15) ನರೇನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 7 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಗಳಿಸಿ ಗೌತಮ್‌ಗೆ ರಿಟರ್ನ್ ಕ್ಯಾಚ್ ನೀಡಿದರು. ನಿತಿಶ್ ರಾಣಾ(3)ಕೂಡ ಬೇಗನೇ ಔಟಾದರು. ಆಗ ಕೆಕೆಆರ್ ಸ್ಕೋರ್ 3ಕ್ಕೆ 24 ರನ್.

ಕ್ರಿಸ್ ಲಿನ್(18) ಅವರೊಂದಿಗೆ ಕೈಜೋಡಿಸಿದ ನಾಯಕ ಕಾರ್ತಿಕ್ 4ನೇ ವಿಕೆಟ್‌ಗೆ 27 ರನ್ ಜೊತೆಯಾಟ ನಡೆಸಿದರು. ಆದರೆ ಈ ಜೋಡಿಯನ್ನು ಶ್ರೇಯಸ್ ಗೋಪಾಲ್ ಬೇರ್ಪಡಿಸಿದರು.

ಶುಭ್‌ಮನ್ ಗಿಲ್(28, 17 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಕಾರ್ತಿಕ್ 5ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 100ರ ಗಡಿ ದಾಟಿಸಿದರು. 28 ರನ್ ಗಳಿಸಿದ ಗಿಲ್ ಅವರು ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು.

38 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡ 52 ರನ್ ಗಳಿಸಿದ ಕಾರ್ತಿಕ್ 17.1ನೇ ಓವರ್‌ನಲ್ಲಿ ಲಾಫ್‌ಲಿನ್‌ಗೆ ವಿಕೆಟ್ ಒಪ್ಪಿಸಿದರು.

ಔಟಾಗದೆ 49 ರನ್(25 ಎಸೆತ, 3 ಬೌಂಡರಿ, 5 ಸಿಕ್ಸರ್)ಗಳಿಸಿದ ರಸ್ಸಲ್ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲು ನೆರವಾದರು.

 ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಎಲಿಮಿನೇಟರ್ ಪಂದ್ಯ ಆಡುತ್ತಿರುವ ರಾಜಸ್ಥಾನ ತಂಡ ಈಡನ್‌ಗಾರ್ಡನ್ಸ್‌ನಲ್ಲಿ ಕಳಪೆ ದಾಖಲೆ ಹೊಂದಿದೆ. ಇಲ್ಲಿ ಆಡಿರುವ 7 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್

ಕೋಲ್ಕತಾ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 169/7

(ದಿನೇಶ್ ಕಾರ್ತಿಕ್ 52, ರಸ್ಸಲ್ ಔಟಾಗದೆ 49, ಶುಭಮನ್ ಗಿಲ್ 28, ಕೆ.ಗೌತಮ್ 2-15, ಆರ್ಚರ್ 2-33, ಲಾಫ್‌ಲಿನ್ 2-35)

ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 144/4

(ಸ್ಯಾಮ್ಸನ್ 50, ರಹಾನೆ 46, ಕ್ಲಾಸನ್ ಅಜೇಯ 18, ಪಿಯೂಷ್ ಚಾವ್ಲಾ 2-24)

ಪಂದ್ಯಶ್ರೇಷ್ಠ: ಆ್ಯಂಡ್ರೆ ರಸ್ಸೆಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News