ಸತತ 11ನೇ ದಿನವೂ ತೈಲ ಬೆಲೆ ಏರಿಕೆ: ಮುಂಬೈಯಲ್ಲಿ ಲೀಟರ್ ಪೆಟ್ರೋಲ್ ಗೆ 85 ರೂ.
ಹೊಸದಿಲ್ಲಿ, ಮೇ 24: ಕಚ್ಚಾ ತೈಲ ಬೆಲೆ ಏರಿಕೆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಕ್ರಮವಾಗಿ ಸಾರ್ವಜನಿಕ ರಂಗದ ತೈಲ ಕಂಪೆನಿಗಳು ತೈಲ ಬೆಲೆಯನ್ನು ಸತತ 11ನೇ ದಿನವಾದ ಗುರುವಾರ ಕೂಡ ಏರಿಕೆ ಮಾಡಿದ್ದು, ಮಹಾನಗರದಾದ್ಯಂತ ತೈಲ ಬೆಲೆ 30 ಪೈಸೆ ಏರಿಕೆಯಾಗಿದೆ.
ಮುಂಬೈಯಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 85 ದಾಟಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 85.29ಕ್ಕೆ ಮಾರಾಟವಾಗಿದೆ. ಬುಧವಾರ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 84.99 ಇದ್ದು, 30 ಪೈಸೆ ಹೆಚ್ಚಳವಾಗಿದೆ. ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ ಲೀಟರ್‌ಗೆ ರೂ. 77.47, ಚೆನ್ನೈಯಲ್ಲಿ ರೂ. 80.42 ಹಾಗೂ ಕೋಲ್ಕತ್ತಾದಲ್ಲಿ ರೂ. 80.12ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ವಾರಗಳಿಂದ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 2 ಏರಿಕೆಯಾಗಿದೆ. ಕರ್ನಾಟಕ ಚುನಾವಣಾ ಫಲಿತಾಂಶದ ಹಿನ್ನೆಯಲ್ಲಿ ಸರಕಾರ ತೈಲ ಬೆಲೆಯನ್ನು 20 ದಿನಗಳ ಕಾಲ ಏರಿಕೆ ಮಾಡಿರಲಿಲ್ಲ.
ಡೀಸೆಲ್ ಬೆಲೆ ಕೂಡ ಸತತವಾಗಿ ಏರಿಕೆಯಾಗುತ್ತಿದ್ದು, ಮಹಾನಗರಗಳಲ್ಲಿ ಲೀಟರ್‌ಗೆ ಬುಧವಾರಕ್ಕಿಂತ 30 ಪೈಸೆ ಏರಿಕೆಯಾಗಿದೆ. ಡೀಸೆಲ್ ಮುಂಬೈಯಲ್ಲಿ ವೆಚ್ಚದಾಯಕವಾಗಿದ್ದು, ಲೀಟರ್‌ಗೆ ರೂ. 72.96ಕ್ಕೆ ಏರಿಕೆಯಾಗಿದೆ. ಚೆನ್ನೈಯಲ್ಲಿ ಲೀಟರ್‌ಗೆ ರೂ. 72.35, ಕೋಲ್ಕತ್ತಾದಲ್ಲಿ ರೂ. 71.08, ದಿಲ್ಲಿಯಲ್ಲಿ ರೂ. 68.53ಕ್ಕೆ ಏರಿಕೆಯಾಗಿದೆ.