×
Ad

ಮೋದಿ-ಶಾ ಜೋಡಿ ದೇಶಕ್ಕೆ ಅಪಾಯಕಾರಿ ಎನ್ನುವುದು ಜನತೆಗೆ ಗೊತ್ತು: ಕಾಂಗ್ರೆಸ್

Update: 2018-05-26 19:02 IST

ಹೊಸದಿಲ್ಲಿ,ಮೇ 26: ನಾಲ್ಕು ವರ್ಷಗಳ ಎನ್‌ಡಿಎ ಆಡಳಿತದ ಬಳಿಕ ಈಗ ಜನರಿಗೆ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ದೇಶಕ್ಕೆ ಅಪಾಯಕಾರಿ ಎನ್ನುವುದು ಗೊತ್ತಾಗಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.

ಮೋದಿ ಸರಕಾರವು ನಾಲ್ಕು ವರ್ಷಗಳ ಅವಧಿಯನ್ನು ಪೂರೈಸಿರುವ ಸಂದರ್ಭದಲ್ಲಿ ‘ಭಾರತಕ್ಕೆ ದ್ರೋಹವಾಗಿದೆ’ ಎಂಬ ಕಿರುಪುಸ್ತಿಕೆಯನ್ನು ಬಿಡುಗಡೆಗೊಳಿಸಿದ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್,ಅಶೋಕ ಗೆಹ್ಲೋಟ್ ಮತ್ತು ರಣದೀಪ ಸುರ್ಜೆವಾಲಾ ಅವರು ಎನ್‌ಡಿಎ ಆಡಳಿತದಡಿ ಭೀತಿ ಮತ್ತು ದ್ವೇಷದ ವಾತಾವರಣ ಸೃಷ್ಟಿಯಾಗಿದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೋದಿ-ಶಾ ಜೋಡಿ ದೇಶಕ್ಕೆ ಅಪಾಯಕಾರಿ ಎನ್ನುವುದು ಜನರಿಗೆ ಗೊತ್ತಾಗಿದೆ. ನಾಲ್ಕು ವರ್ಷಗಳ ಮೋದಿ ಸರಕಾರದ ಆಡಳಿತವನ್ನು ವಿಶ್ವಾಸಘಾತ,ಮೋಸ,ಸೇಡು ಮತ್ತು ಸುಳ್ಳುಗಳು ಈ ನಾಲ್ಕು ಶಬ್ದಗಳ ಮೂಲಕ ವ್ಯಾಖ್ಯಾನಿಸಬಹುದಾಗಿದೆ ಎಂದು ಸುರ್ಜೆವಾಲಾ ಹೇಳಿದರೆ,ದಲಿತರು,ಗಿರಿಜನರು,ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಪ್ರಸ್ತಾಪಿಸಿದ ಆಝಾದ್ ಅವರು,ಬಿಜೆಪಿ ಸರಕಾರದಡಿ ಭಾರತದಲ್ಲಿ ಯಾರೂ ಸುರಕ್ಷಿತರಾಗಿಲ್ಲ. ಪ್ರತಿಯೊಬ್ಬರೂ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಎಂದರು.

ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಭೀತಿ,ದ್ವೇಷ ಮತ್ತು ಹಿಂಸೆಯ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಗೆಹ್ಲೋಟ್ ಹೇಳಿದರು.

ಬಿಜೆಪಿ ನೇತೃತ್ವದ ಸರಕಾರದ ನಾಲ್ಕು ವರ್ಷಗಳ ದುರಾಡಳಿತ ಕುರಿತು ಕಿರುಪುಸ್ತಿಕೆಯ ಪ್ರಕಟಣೆಯೊಂದಿಗೆ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ 40 ಪ್ರಶ್ನೆಗಳನ್ನೂ ಇರಿಸಿದೆ.

ದೇಶದಲ್ಲಿಯ ಪ್ರಸಕ್ತ ವಾತಾವರಣವನ್ನು ವಿವರಿಸುವ ಕಿರುಚಿತ್ರವೊಂದನ್ನೂ ಈ ನಾಯಕರು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News