×
Ad

ಐಎಫ್‌ಎಸ್ ಅಧಿಕಾರಿ ಚತುರ್ವೇದಿಗೆ ಪರಿಹಾರ ನಿರಾಕರಿಸಿದ್ದ ಹಿ.ಪ್ರ.ಹೈಕೋರ್ಟ್ ಆದೇಶ ರದ್ದು

Update: 2018-05-26 19:10 IST

ಹೊಸದಿಲ್ಲಿ,ಮೇ 26: ಹಿಮಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿ ವಿನೀತ್ ಚೌಧರಿಯವರು ತನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ದೂರಿಗೆ ತಡೆಯಾಜ್ಞೆಯನ್ನು ಕೋರಿ ಐಎಫ್‌ಎಸ್ ಅಧಿಕಾರಿ ಸಂಜೀವ ಚತುರ್ವೇದಿ ಯವರು ಸಲ್ಲಿಸಿದ್ದ ಅರ್ಜಿಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.

ಉಚ್ಚ ನ್ಯಾಯಾಲಯದ ಆದೇಶವು ಚತುರ್ವೇದಿಯವರ ಅರ್ಜಿಯಲ್ಲಿನ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ,ಅವರ ದೂರಿಗೆ ಪರಿಹಾರವನ್ನೂ ನೀಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು,ಅರ್ಜಿಯನ್ನು ಮರುಪರಿಶೀಲಿಸುವಂತೆ ಮತ್ತು ತಾರ್ಕಿಕ ಆದೇಶವನ್ನು ಹೊರಡಿಸುವಂತೆ ಸೂಚಿಸಿ ಪ್ರಕರಣವನ್ನು ಹೈಕೋರ್ಟ್ ಅಂಗಳಕ್ಕೆ ಮರಳಿಸಿದೆ.

1982ರ ತಂಡದ ಐಎಎಸ್ ಅಧಿಕಾರಿ ಹಾಗೂ ಏಮ್ಸ್-ದಿಲ್ಲಿಯ ಮಾಜಿ ಉಪನಿರ್ದೇಶಕರಾಗಿರುವ ಚೌಧರಿ ಅವರು ಚತುರ್ವೇದಿ ತನ್ನ ಕುರಿತು ರಹಸ್ಯ ಪತ್ರವನ್ನು ಬಹಿರಂಗಗೊಳಿಸುವ ಮೂಲಕ ತನಗೆ ಮಾನನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ 2016,ಎಪ್ರಿಲ್‌ನಲ್ಲಿ ದೂರು ದಾಖಲಿಸಿದ್ದರು.

 2014,ಆಗಸ್ಟ್ 16ರಂದು ಆಗ ಏಮ್ಸ್‌ನ ಮುಖ್ಯ ಜಾಗ್ರತ ಅಧಿಕಾರಿಯಾಗಿದ್ದ ಚತುರ್ವೇದಿ ಚೌಧರಿ ವಿರುದ್ಧ ಬಾಕಿಯಿದ್ದ ಭ್ರಷ್ಟಾಚಾರ ದೂರುಗಳು/ಇಲಾಖಾ ವಿಚಾರಣೆಗಳು/ಕಾನೂನು ಕ್ರಮಗಳ ಕುರಿತು ಮಾಹಿತಿಯನ್ನು ಹಿಮಾಚಲ ಪ್ರದೇಶದ ಆಗಿನ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿದ್ದ ರಹಸ್ಯ ಪತ್ರದಲ್ಲಿ ಉಲ್ಲೇಖಿಸಿದ್ದರು. ತನ್ನನ್ನು ಅವಮಾನಿಸುವ ಮತ್ತು ತನ್ನ ವರ್ಚಸ್ಸಿಗೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಚತುರ್ವೇದಿ ಈ ಪತ್ರವನ್ನು ಬಹಿರಂಗಗೊಳಿಸಿದ್ದಾರೆ ಎಂದು ಚೌಧರಿ ಆರೋಪಿಸಿದ್ದರು.

ಚೌಧರಿಯವರ ದೂರಿನ ಮೇರೆಗೆ ಶಿಮ್ಲಾದ ನ್ಯಾಯಾಲಯವೊಂದು 2016,ನ.24ರಂದು ಚತುರ್ವೇದಿಯವರಿಗೆ ಸಮನ್ಸ್ ಹೊರಡಿಸಿತ್ತು.

ಈ ಆದೇಶವನ್ನು ಮತ್ತು ತನ್ನ ವಿರುದ್ಧದ ದೂರನ್ನು ರದ್ದುಗೊಳಿಸುವಂತೆ ಕೋರಿ ಚೌಧರಿ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಸರಕಾರದಿಂದ ಕಡ್ಡಾಯ ಅನುಮತಿಯನ್ನು ಪಡೆದುಕೊಳ್ಳದೆ ಮತ್ತು ರಹಸ್ಯ ಪತ್ರ ಸೋರಿಕೆಯಲ್ಲಿ ತನ್ನ ಕೈವಾಡವಿರುವ ಬಗ್ಗೆ ಯಾವುದೇ ಸಾಕ್ಷಧಾರಗಳಿಲ್ಲದೆ ವಿಚಾರಣೆಯನ್ನು ಎದುರಿಸುವಂತೆ ತನಗೆ ಸಮನ್ಸ್ ನೀಡಲಾಗಿದೆ ಎಂದು ಅವರು ತನ್ನ ಅರ್ಜಿಯಲ್ಲಿ ತಿಳಿಸಿದ್ದರು.

ಎ.6ರಂದು ಉಚ್ಚ ನ್ಯಾಯಾಲಯವು ಸ್ಥಳೀಯ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು ಮತ್ತು ಸಂಬಂಧಿತ ನ್ಯಾಯಾಲಯದಲ್ಲಿ ಹಾಜರಾಗುವಂತೆ ಚತುರ್ವೇದಿಯವರಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News