10 ವರ್ಷಗಳ ಬಳಿಕ ಮತ್ತೆ ಮಿಂಚಿದ ವಾಟ್ಸನ್
ಚೆನ್ನೈ, ಮೇ 29: ಕಳೆದ ಎರಡು ವರ್ಷಗಳಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ವಾಟ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪರ ಕಳಪೆ ಪ್ರದರ್ಶನ ನೀಡಿದ್ದು ಐಪಿಎಲ್‌ನಲ್ಲಿ ಅವರ ಪ್ರಯಾಣ ಅಂತ್ಯವಾಯಿತ್ತೆಂದು ಭಾವಿಸಲಾಗಿತ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 8 ಪಂದ್ಯಗಳನ್ನು ಆಡಿದ್ದ ವಾಟ್ಸನ್ ಕೇವಲ 71 ರನ್ ಗಳಿಸಿದ್ದರು. ತನ್ನ ಪ್ರದರ್ಶನದ ಬಗ್ಗೆ ವಾಟ್ಸನ್ ಸ್ವತಃ ಬೇಸರ ವ್ಯಕ್ತಪಡಿಸಿದ್ದರು.
ಇದೀಗ ಅವೆಲ್ಲವೂ ಕಹಿ ನೆನಪು ಮಾತ್ರ. ಈ ವರ್ಷದ ಐಪಿಎಲ್‌ನಲ್ಲಿ ಒಟ್ಟು 555 ರನ್ ಗಳಿಸಿದ ವಾಟ್ಸನ್ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ರವಿವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಔಟಾಗದೆ 117 ರನ್ ಗಳಿಸಿ ಚೆನ್ನೈ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಲು ಪ್ರಮುಖ ಪಾತ್ರವಹಿಸಿದ್ದರು. ಐಪಿಎಲ್ ಫೈನಲ್‌ನಲ್ಲಿ ಶತಕ ಸಿಡಿಸಿದ್ದ ವಾಟ್ಸನ್ ತನ್ನಲ್ಲಿನ್ನೂ ಕ್ರಿಕೆಟ್ ಇದೆ ಎಂದು ತೋರಿಸಿಕೊಟ್ಟಿದ್ದಾರೆ.
ಹತ್ತು ವರ್ಷಗಳ ಹಿಂದೆ ವಾಟ್ಸನ್ ಅವರ ವೀರೋಚಿತ ಪ್ರದರ್ಶನದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿತ್ತು. 2008ರಲ್ಲಿ ವಾಟ್ಸನ್ ನೀಡಿದ್ದ ಪ್ರದರ್ಶನ ಅವರಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೆಲೆವೂರಲು ನೆರವಾಗಿತ್ತು. ಈಗ ಅವರು ನೀಡಿರುವ ಪ್ರದರ್ಶನ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮುಂದುವರಿಯಲು ಸಹಾಯವಾಗಬಹುದು.
37ರ ಹರೆಯದಲ್ಲೂ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿರುವ ವಾಟ್ಸನ್ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಜನವರಿಯಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ತಂಡ ವಾಟ್ಸನ್‌ಗೆ ಆರಂಭದಲ್ಲಿ 1 ಕೋ.ರೂ. ಬಿಡ್ ಸಲ್ಲಿಸಿತ್ತು. ಅಗ್ರ ಸರದಿಯಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ವಾಟ್ಸನ್‌ರನ್ನು ಹರಾಜಿನ ಕೊನೆಯಲ್ಲಿ ತಂಡಕ್ಕೆ ಸೆಳೆದುಕೊಂಡಿತ್ತು. ಆಸ್ಟ್ರೇಲಿಯದ ಟ್ವೆಂಟಿ-20 ಲೀಗ್ ಬಿಗ್‌ಬಾಶ್‌ನಲ್ಲಿ ಸಿಡ್ನಿ ಥಂಡರ್ಸ್ ಪರ ವಾಟ್ಸನ್ 331 ರನ್ ಗಳಿಸಿದ್ದರು. ಪಾಕಿಸ್ತಾನ ಸೂಪರ್ ಲೀಗ್‌ನಲ್ಲೂ ಒಟ್ಟು 319 ರನ್ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನ ಪ್ರಮುಖ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ವಾಟ್ಸನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಒಲವು ತೋರಿದ್ದರು.