ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 1 ಪೈಸೆ ಇಳಿಕೆ: ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ...
ಹೊಸದಿಲ್ಲಿ, ಮೇ 30: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸಿದ್ದಾರೆ. "ನಿಮ್ಮ ಯೋಚನೆ ಚೆಲ್ಲಾಟವಾಗಿದ್ದರೆ, ಅದು ಬಾಲಿಶ ಮತ್ತು ಕೀಳು ಅಭಿರುಚಿಯದ್ದು" ಎಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಒಂದು ಪೈಸೆ ಇಳಿಸಿದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
"ಮಾನ್ಯ ಪ್ರಧಾನಿಯವರೇ, ನೀವು ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಒಂದು ಪೈಸೆ ಇಳಿಸಿದ್ದೀರಿ. ಒಂದು ಪೈಸೆ?? ನಿಮ್ಮ ಯೋಚನೆ ಚೆಲ್ಲಾಟವಾಗಿದ್ದರೆ, ಅದು ಬಾಲಿಶ ಮತ್ತು ಕೀಳು ಅಭಿರುಚಿಯದ್ದು. ನಾನು ಕಳೆದ ವಾರ ಎಸೆದ ಇಂಧನ ಸವಾಲಿಗೆ ಒಂದು ಪೈಸೆ ಕಡಿತ ಸಮರ್ಪಕ ಸ್ಪಂದನೆಯಲ್ಲ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಒಂದು ಪೈಸೆ ಇಳಿಸಿ ಪರಿಷ್ಕರಿಸಲಾಗಿತ್ತು. ಆದರೆ ಇದಕ್ಕೂ ಮೊದಲು 60 ಪೈಸೆಯ ಕಡಿತ ಘೋಷಣೆ ಅಧಿಕಾರಿಗಳ ಮಟ್ಟದಲ್ಲಿ ಆಗಿರುವ ತಪ್ಪು ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸ್ಪಷ್ಟಪಡಿಸಿದ್ದವು. ದೆಹಲಿಯಲ್ಲಿ ಇದೀಗ ಪೆಟ್ರೋಲ್ ದರ ಲೀಟರ್ ಗೆ 78.42 ರೂಪಾಯಿ ಮತ್ತು ಡೀಸೆಲ್ ದರ 69.30 ರೂಪಾಯಿ ಆಗಿದೆ.
ಸತತ ಹದಿನಾರು ದಿನಗಳ ಕಾಲ ಇಂಧನ ಬೆಲೆ ಏರಿದ್ದು, 17ನೇ ದಿನ ಒಂದು ಪೈಸೆಯಷ್ಟು ಇಳಿಸಲಾಗಿದೆ. ಕಳೆದ 15 ದಿನಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 3.8 ರೂಪಾಯಿ ಹಾಗೂ ಡೀಸೆಲ್ ದರ 3.38 ರೂಪಾಯಿ ಹೆಚ್ಚಳವಾಗಿದೆ.