×
Ad

ರಿಯಲ್ ಮ್ಯಾಡ್ರಿಡ್ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ ಝೈದಾನ್

Update: 2018-05-31 23:43 IST

ಮ್ಯಾಡ್ರಿಡ್, ಮೇ 31: ಫ್ರಾನ್ಸ್ ಫುಟ್ಬಾಲ್ ದಿಗ್ಗಜ ಝೈನುದ್ದೀನ್ ಝೈದಾನ್ ಯುರೋಪಿಯನ್ ಚಾಂಪಿಯನ್ಸ್ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್‌ನ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಐದು ದಿನಗಳ ಹಿಂದೆಯಷ್ಟೇ ರಿಯಲ್ ಮ್ಯಾಡ್ರಿಡ್ ಸತತ ಮೂರು ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಲು ಮಾರ್ಗದರ್ಶನ ನೀಡಿದ್ದ ಝೈದಾನ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಕೋಚ್ ಹುದ್ದೆ ತ್ಯಜಿಸುವ ಬಗ್ಗೆ ಮಾಹಿತಿ ನೀಡಿದರು.

 ‘‘ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಇಂತಹ ನಿರ್ಧಾರ ಕೈಗೊಳ್ಳುವುದು ತುಂಬಾ ಕಠಿಣವಾದುದು ಎಂದು ನನಗೆ ಗೊತ್ತಿದೆ. ಆದರೆ, ಇದು ಅತ್ಯಂತ ಮುಖ್ಯವಾಗಿದೆ. ನಾನು ಪ್ರತಿಯೊಬ್ಬರಿಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ರಿಯಲ್ ಮ್ಯಾಡ್ರಿಡ್ ತಂಡ ಗೆಲುವಿನ ಓಟವನ್ನು ಮುಂದುವರಿಸಬೇಕು. ಆ ನಿಟ್ಟಿನಲ್ಲಿ ಬದಲಾವಣೆಯಾಗಬೇಕಾಗಿದೆ. ಮೂರು ವರ್ಷಗಳ ಬಳಿಕ ಮ್ಯಾಡ್ರಿಡ್‌ಗೆ ಮತ್ತೊಬ್ಬ ಕೋಚ್‌ನ ಅಗತ್ಯವಿದೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ’’ ಎಂದು ಝೈದಾನ್ ಹೇಳಿದ್ದಾರೆ.

ಶನಿವಾರ ರಿಯಲ್ ಮ್ಯಾಡ್ರಿಡ್ ತಂಡ ಲಿವರ್‌ಪೂಲ್ ತಂಡವನ್ನು 3-1 ಅಂತರದಿಂದ ಸೋಲಿಸುವ ಮೂಲಕ ಸತತ ಮೂರನೇ ಬಾರಿ ಯುರೋಪಿಯನ್ ಕಪ್ ಮುಡಿಗೇರಿಸಿಕೊಂಡಿತ್ತು. ಝೈದಾನ್ ಕೋಚ್ ಆಗಿ ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡಿದ್ದರು.

ಝೈದಾನ್ ಒಟ್ಟಾರೆ ನಾಲ್ಕು ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆದ್ದುಕೊಂಡಿದ್ದಾರೆ. ಮ್ಯಾಡ್ರಿಡ್ ಕೋಚ್ ಆಗಿ ಮೂರು ಬಾರಿ ಹಾಗೂ ಆಟಗಾರನಾಗಿ ಒಂದು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರು.

‘‘ನಾನು ಮ್ಯಾಡ್ರಿಡ್ ಕ್ಲಬ್‌ನ್ನು ತುಂಬಾ ಇಷ್ಟಪಡುತ್ತೇನೆ. ಕ್ಲಬ್‌ನ ಅಧ್ಯಕ್ಷರು ನನಗೆ ಸರ್ವರೀತಿಯಲ್ಲಿ ಸಹಕಾರ ನೀಡಿದ್ದಾರೆ. ಕ್ಲಬ್‌ಗೆ ಸದಾ ಕಾಲ ಋಣಿಯಾಗಿರುವೆ’’ ಝೈದಾನ್ ಹೇಳಿದ್ದಾರೆ.

ಝೈದಾನ್ 2016ರ ಜನವರಿಯಲ್ಲಿ ಮ್ಯಾಡ್ರಿಡ್ ಕೋಚ್ ಆಗಿ ನೇಮಕಗೊಂಡಿದ್ದರು. ಕೋಚ್ ರಫೆಲ್ ಬೆನಿಟೆಝ್‌ರನ್ನು ಉಚ್ಚಾಟಿಸಿದ ವೇಳೆ ತಂಡದ ಡ್ರೆಸ್ಸಿಂಗ್ ರೂಮ್ ವಿಭಜನೆಯಾಗಿತ್ತು. ಝೈದಾನ್ ಕೋಚ್ ಆದ ತಕ್ಷಣ ತಂಡವನ್ನು ಒಟ್ಟುಗೂಡಿಸಿದರು. 45ರ ಹರೆಯದ ಝೈದಾನ್ ಮಾರ್ಗದರ್ಶನದಲ್ಲಿ 149 ಪಂದ್ಯಗಳನ್ನು ಆಡಿದ್ದ ಮ್ಯಾಡ್ರಿಡ್ 104ರಲ್ಲಿ ಗೆಲುವು ಹಾಗೂ 29ರಲ್ಲಿ ಡ್ರಾ ಸಾಧಿಸಿತ್ತು. 9 ಟ್ರೋಫಿಗಳನ್ನು ಗೆದ್ದುಕೊಂಡಿತ್ತು. 2016ರಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದ ಮ್ಯಾಡ್ರಿಡ್ ಝೈದಾನ್ ಕೋಚಿಂಗ್‌ನಲ್ಲಿ ಮೊದಲ ಚಾಂಪಿಯನ್ಸ್ ಲೀಗ್ ಟ್ರೋಫಿ ಜಯಿಸಿತು. 2017ರಲ್ಲಿ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಟ್ರೋಫಿ ಹಾಗೂ ಲಾಲಿಗ ಪ್ರಶಸ್ತಿ ಜಯಿಸಲು ಮಾರ್ಗದರ್ಶನ ನೀಡಿದ್ದರು. 59 ವರ್ಷಗಳ ಬಳಿಕ ಮ್ಯಾಡ್ರಿಡ್ ಡಬಲ್ ಸಾಧನೆ ಮಾಡಿತ್ತು. ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಜುವೆಂಟಸ್ ತಂಡವನ್ನು 4-1 ಅಂತರದಿಂದ ಮಣಿಸಿತ್ತು. ಸತತ ಎರಡು ಬಾರಿ ಚಾಂಪಿಯನ್ಸ್ ಲೀಗ್ ಜಯಿಸಿದ ಮೊದಲ ತಂಡ ಎನಿಸಿಕೊಂಡಿತ್ತು.

ಕಳೆದ ಶನಿವಾರ ಕೋಚ್ ಆಗಿ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಝೈದಾನ್ ಮಾಜಿ ಕೋಚ್‌ಗಳಾದ ಬಾಬ್ ಪೈಸ್ಲೆ (ಲಿವರ್‌ಪೂಲ್ ಪರ 3 ಟ್ರೋಫಿ) ಹಾಗೂ ಕಾರ್ಲೊ ಅನ್ಸೆಲೊಟ್ಟಿ (ಎಸಿ ಮಿಲನ್ ಪರ 2, ರಿಯಲ್ ಮ್ಯಾಡ್ರಿಡ್ ಪರ 1 ಟ್ರೋಫಿ) ಅವರ ಇಲೈಟ್ ಕ್ಲಬ್‌ಗೆ ಸೇರ್ಪಡೆಯಾಗಿದ್ದರು. ಝೈದಾನ್ ಹ್ಯಾಟ್ರಿಕ್ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಮೊದಲ ಕೋಚ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News