×
Ad

ಸಿಲಿಕ್, ಥೀಮ್, ಮುಗುರುಝ 3ನೇ ಸುತ್ತಿಗೆ

Update: 2018-05-31 23:49 IST

ಪ್ಯಾರಿಸ್, ಮೇ 31: ಮೂರನೇ ಶ್ರೇಯಾಂಕದ ಮರಿನ್ ಸಿಲಿಕ್, ಆಸ್ಟ್ರೀಯದ ಡೊಮಿನಿಕ್ ಥೀಮ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೇರಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಝ ಕೂಡ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಕೆನಡಾದ ಉದಯೋನ್ಮುಖ ಆಟಗಾರ ಡೆನಿಸ್ ಶಪೊವಾಲೊವ್ ಅಭಿಯಾನ ಕೊನೆಗೊಂಡಿದೆ.

ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಲಿಕ್ ಪೊಲೆಂಡ್‌ನ ಕ್ವಾಲಿಫೈಯರ್ ಹಾಗೂ ವಿಶ್ವದ ನಂ.188ನೇ ಆಟಗಾರ ಹ್ಯೂಬರ್ಟ್ ಹುರ್ಕಾಝ್‌ರನ್ನು 6-2, 6-2, 6-7(3/7) ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ 8ನೇ ಬಾರಿ ಫ್ರೆಂಚ್ ಓಪನ್‌ನಲ್ಲಿ ಮೂರನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಮಾಜಿ ಯುಎಸ್ ಓಪನ್ ಚಾಂಪಿಯನ್ ಸಿಲಿಕ್ ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಈ ಬಾರಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಲು ಮುಂದಿನ ಸುತ್ತಿನಲ್ಲಿ ಅಮೆರಿಕದ ಸ್ಟೀವ್ ಜಾನ್ಸನ್‌ರನ್ನು ಎದುರಿಸಲಿದ್ದಾರೆ.

ಇದೇ ವೇಳೆ ಡೊಮಿನಿಕ್ ಥೀಮ್ ಸತತ ಮೂರನೇ ವರ್ಷ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಥೀಮ್ ಗ್ರೀಕ್‌ನ ಯುವ ಆಟಗಾರ ಸ್ಟೆಫಾನೊಸ್ ಸಿಟ್‌ಸಿಪಾಸ್‌ರನ್ನು 6-2, 2-6, 6-4, 2-2 ಅಂತರದಿಂದ ಮಣಿಸಿದರು. 19ರ ಹರೆಯದ ಸ್ಟೆಫಾನೊಸ್ ಬಾರ್ಸಿಲೋನ ಮಾಸ್ಟರ್ಸ್‌ನಲ್ಲಿ ಥೀಮ್‌ಗೆ ಸೋಲುಣಿಸಿದ್ದರು. ಸ್ಟೆಫಾನೊಸ್ 1969ರ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಮೂರನೇ ಸುತ್ತಿಗೇರಿದ ಗ್ರೀಕ್ ಆಟಗಾರ ಎನಿಸಿಕೊಳ್ಳುವ ಗುರಿ ಹೊಂದಿದ್ದರು. ಆದರೆ, ಅವರ ಕನಸು ಈಡೇರಲಿಲ್ಲ. ಕಳೆದ ವರ್ಷ ಸೆಮಿ ಫೈನಲ್‌ನಲ್ಲಿ ರಫೆಲ್ ನಡಾಲ್‌ಗೆ ಸೋತಿದ್ದ ಥೀಮ್ ಮುಂದಿನ ಸುತ್ತಿನಲ್ಲಿ ಇಟಲಿಯ ಮ್ಯಾಟೆಯೊ ಬೆರ್ರಿಟ್ಟಿನಿ ಅವರನ್ನು ಎದುರಿಸಲಿದ್ದಾರೆ.

ಕೆನಡಾದ 19ರ ಹರೆಯದ ಆಟಗಾರ ಶಪೊವಾಲೊವ್ ರನ್ನು ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಮ್ಯಾಕ್ಸಿಮಿಲನ್ ಮಾರ್ಟೆರೆರ್ 5-7, 7-6(7/4), 7-5, 6-4 ಸೆಟ್‌ಗಳಿಂದ ಸೋಲಿಸಿ ಟೂರ್ನಿಯಿಂದ ಹೊರಹಾಕಿದರು. ವಿಶ್ವದ ನಂ.70ನೇ ಆಟಗಾರ ಮ್ಯಾಟೆಯೊ ಸತತ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ತಲುಪಿದ್ದಾರೆ. ಮುಗುರುಝ ಮೂರನೇ ಸುತ್ತಿಗೆ: ಮಹಿಳೆಯರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ನ ವೈಲ್ಡ್‌ಕಾರ್ಡ್ ಆಟಗಾರ್ತಿ ಫಿಯೊನಾ ಫೆರ್ರೊರನ್ನು 6-4, 6-3 ನೇರ ಸೆಟ್‌ಗಳಿಂದ ಸೋಲಿಸಿದ ಗಾರ್ಬೈನ್ ಮುಗುರುಝ ಫ್ರೆಂಚ್ ಓಪನ್‌ನಲ್ಲಿ ಮೂರನೇ ಸುತ್ತಿನಲ್ಲಿ ಸ್ಥಾನ ಪಡೆದಿದ್ದಾರೆ. 2016ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿರುವ ಮುಗುರುಝ ಇದೇ ಮೊದಲ ಬಾರಿ 21ರ ಹರೆಯದ ಫೆರ್ರೊರನ್ನು ಎದುರಿಸಿದರು. ಫ್ರೆಂಚ್ ಓಪನ್ ಆರಂಭಕ್ಕೆ ಮೊದಲು ಮುಗುರುಝ ಆವೆಮಣ್ಣಿನ ಅಂಗಣದಲ್ಲಿ ಮಿಶ್ರ ಫಲ ಅನುಭವಿಸಿದ್ದರು. ಮ್ಯಾಡ್ರಿಡ್ ಓಪನ್‌ನಲ್ಲಿ ಮೂರನೇ ಸುತ್ತಿನಲ್ಲಿ ಸೋತಿದ್ದ ಮುಗುರುಝ ರೋಮ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಎಡವಿದ್ದರು. ಮುಗುರುಝ ಸತತ ಐದನೇ ವರ್ಷ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದು ಮುಂದಿನ ಸುತ್ತಿನಲ್ಲಿ 2010ರ ಫ್ರೆಂಚ್ ಓಪನ್ ರನ್ನರ್ಸ್ -ಅಪ್ ಆಸ್ಟ್ರೇಲಿಯದ ಸಮಂತಾ ಸ್ಟೋಸರ್ ಅಥವಾ ರಶ್ಯದ ಅನಸ್ಟಾಸಿಯಾ ಪಾವ್ಲಚೆಂಕೊವಾರನ್ನು ಎದುರಿಸಲಿದ್ದಾರೆ.

ನಡಾಲ್, ಶರಪೋವಾ, ಹಾಲೆಪ್ ಮೂರನೇ ಸುತ್ತಿಗೆ ಲಗ್ಗೆ

 ಸ್ಪೇನ್‌ನ ರಫೆಲ್ ನಡಾಲ್ ಅರ್ಜೆಂಟೀನದ ಗುಡೊ ಪೆಲ್ಲಾರನ್ನು 6-2, 6-1, 6-1 ಸೆಟ್‌ಗಳಿಂದ ಸೋಲಿಸಿ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

31ರ ಹರೆಯದ ನಡಾಲ್ ಮುಂದಿನ ಸುತ್ತಿನಲ್ಲಿ ರಿಚರ್ಡ್ ಗ್ಯಾಸ್ಕಟ್‌ರನ್ನು ಎದುರಿಸಲಿದ್ದಾರೆ.

ಇದೇ ವೇಳೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಮರಿಯಾ ಶರಪೋವಾ ಹಾಗೂ ಸಿಮೊನಾ ಹಾಲೆಪ್ 3ನೇ ರೌಂಡ್‌ಗೆ ತಲುಪಿದ್ದಾರೆ. ಶರಪೋವಾ 2ನೇ ಸುತ್ತಿನ ಪಂದ್ಯದಲ್ಲಿ ಕ್ರೊಯೇಷಿಯದ ಡೊನ್ನಾ ವಿಕಿಕ್‌ರನ್ನು 7-5, 6-4 ಅಂತರದಿಂದ ಮಣಿಸಿದರು. ಶರಪೋವಾ ಮುಂದಿನ ಸುತ್ತಿನಲ್ಲಿ ಕರೊಲಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ.

ರೊಮಾನಿಯದ ಹಾಲೆಪ್ ಅಮೆರಿಕದ ಟೇಲರ್ ಟೌನ್‌ಸೆಂಡ್‌ರನ್ನು 6-3, 6-1 ನೇರ ಸೆಟ್‌ಗಳಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News