ನಿರೀಕ್ಷೆಯ ಮಟ್ಟ ತಲುಪದ ಪ್ರಧಾನಿಯ ಮಹತ್ವಾಕಾಂಕ್ಷೆಯ ‘ಉಡಾನ್’ ಯೋಜನೆ

Update: 2018-06-11 12:32 GMT

ಹೊಸದಿಲ್ಲಿ, ಜೂ.11: ಹೆಚ್ಚು ಹೆಚ್ಚು ಜನರು ವಿಮಾನಗಳಲ್ಲಿ ಪ್ರಯಾಣಿಸುವಂತಾಗಲು ಸಣ್ಣ ನಗರಗಳಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ಧಿ ಅಥವಾ ಹೊಸ ನಿಲ್ದಾಣಗಳ ನಿರ್ಮಾಣ ಮಾಡುವ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆ ಕಳೆದ ವರ್ಷ ಉದ್ಘಾಟನೆಗೊಂಡಿದ್ದರೂ ಅದು ತನ್ನ ಉದ್ದೇಶವನ್ನು ಸದ್ಯೋಭವಿಷ್ಯದಲ್ಲಿ ಈಡೇರಿಸುವ ಸಾಧ್ಯತೆ ಕಡಿಮೆಯಾಗಿದೆ.

ಉಡಾನ್- ಅಂದರೆ ಉಡ್ ದೇಶ ಕಾ ಆಮ್ ನಾಗರಿಕ್ ಎಂಬ ಈ ಯೋಜನೆಯಂಗವಾಗಿ  ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಅಥವಾ ಈಗಿರುವ ಸಣ್ಣ ನಿಲ್ದಾಣಗಳ ಅಭಿವೃದ್ಧಿ ನಿರೀಕ್ಷಿಸಿದ ಮಟ್ಟಕ್ಕೆ ಆಗಿಲ್ಲ. ಈ ಕಾರಣದಿಂದಾಗಿ ಮುಂದಿನ ಐದು ವರ್ಷಗಳಲ್ಲಿ 10 ಕೋಟಿ ಜನರನ್ನು ವಿಮಾನ ಪ್ರಯಾಣಿಕರನ್ನಾಗಿಸುವ ಯೋಜನೆ ಕೈಗೂಡುವ ಸಾಧ್ಯತೆಯಿಲ್ಲವೆಂದು ಸರಕಾರಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಕಳೆದ ವರ್ಷದ ಅಂತ್ಯದೊಳಗಾಗಿ ಸರಕಾರ 31 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಿದ್ದರೂ ಇಲ್ಲಿಯ ತನಕ ಕೇವಲ 16 ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕೆಲ ರಾಜ್ಯಗಳು ತಮ್ಮ ಬಳಿ ವಿಮಾನ ನಿಲ್ದಾಣ ಸ್ಥಾಪನೆಗೆ  ಸಾಕಷ್ಟು ಹಣಕಾಸು ಇಲ್ಲ ಎಂಬ ಸಬೂಬು ನೀಡಿವೆ. ಇನ್ನು ಕೆಲವೆಡೆ ವಿಮಾನ ನಿಲ್ದಾಣಗಳಿಗೆ ಅಗತ್ಯವಾದ  ಏರ್ ಟ್ರಾಫಿಕ್ ಕಂಟ್ರೋಲ್ ಟವರ್, ಟರ್ಮಿನಲ್ ಕಟ್ಟಡ ನಿರ್ಮಿಸುವಲ್ಲಿ ತೊಡಕಾಗಿದೆ.

ಇದೀಗ ಕೇಂದ್ರ ಸರಕಾರ ತಾನೇ ಅಗತ್ಯ ಪರಿಕರಗಳನ್ನು ಒದಗಿಸಿ ಉಳಿದ 15 ವಿಮಾನ ನಿಲ್ದಾಣಗಳು ಜೂನ್ ಅಂತ್ಯದೊಳಗೆ ಕಾರ್ಯಾಚರಿಸುವಂತೆ ಮಾಡುವ ಇರಾದೆ ಹೊಂದಿದೆ. ಯೋಜನೆಯನ್ನು ಕಳೆದ ವರ್ಷ ಜಾರಿಗೊಳಿಸಿದಾಗ ಸರಕಾರ ತನಗೆ ದೇಶದಲ್ಲಿರುವ ಸುಮಾರು 400 ನಿರುಪಯೋಗಿ ವಿಮಾನ ನಿಲ್ದಾಣ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದು ತಿಳಿಸಿತ್ತು.

ವಿಮಾನಯಾನ ಸಚಿವಾಲಯವು ಎರಡು ಹಂತಗಳಲ್ಲಿ ಸುಮಾರು ಒಂದು ಡಜನ್ ವಿಮಾನಯಾನ ಸಂಸ್ಥೆಗಳಿಗೆ ಅನುಮೋದನೆ ನೀಡಿದ್ದು ಇವುಗಳಲ್ಲಿ ಸ್ಟಾರ್ಟ್-ಅಪ್ ಗಳಾದ ಏರ್ ಡೆಕ್ಕನ್ ಹಾಗೂ ಏರ್ ಒಡಿಶಾ ಕೂಡ ಸೇರಿವೆ. ಒಟ್ಟು 56 ವಿಮಾನ ನಿಲ್ದಾಣಗಳ ಮುಖಾಂತರ 450 ಮಾರ್ಗಗಳಲ್ಲಿ ವಿಮಾನಯಾನ ಸೇವೆ ಒದಗಿಸುವ ಗುರಿಯೂ ಇತ್ತು. ಆದರೆ ಈಗ ಮೊದಲ ಹಂತದಲ್ಲಿ 128 ಮಾರ್ಗಗಳ ಪೈಕಿ ಕೇವಲ 56ರಲ್ಲಿ ವಿಮಾನಯಾನ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News