ಎಟಿಪಿ ರ್ಯಾಂಕಿಂಗ್: ಯೂಕಿ, ಪ್ರಜ್ಞೇಶ್‌ಗೆ ಭಡ್ತಿ

Update: 2018-06-11 18:13 GMT

ಹೊಸದಿಲ್ಲಿ, ಜೂ.11: ಅಗ್ರ ಶ್ರೇಯಾಂಕದ ಭಾರತದ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ 9 ಸ್ಥಾನ ಭಡ್ತಿ ಪಡೆದು 84ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

14 ಸ್ಥಾನ ಭಡ್ತಿ ಪಡೆದಿರುವ ಪ್ರಜ್ಞೇಶ್ ಗುಣೇಶ್ವರನ್ ಜೀವನಶ್ರೇಷ್ಠ 169ನೇ ಸ್ಥಾನ ತಲುಪಿದ್ದಾರೆ.

ಯೂಕಿ ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದರು. ಆದರೆ ಸರ್ಬಿಟನ್ ಚಾಲೆಂಜರ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಯೂಕಿ ಎರಡು ಟೂರ್ನಿಯಲ್ಲಿ ಒಟ್ಟು 30 ಅಂಕ ಗಳಿಸಿದ್ದಾರೆ.

ಎಡಗೈ ಆಟಗಾರ ಪ್ರಜ್ಞೇಶ್ ಪ್ಯಾರಿಸ್‌ನಲ್ಲಿ ಚೊಚ್ಚಲ ಗ್ರಾನ್‌ಸ್ಲಾಮ್ ಆಡುವ ಅವಕಾಶದಿಂದ ವಂಚಿತರಾಗಿದ್ದರು. ವರ್ಷದ ಮೊದಲ ಆರು ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಪ್ರಜ್ಞೇಶ್ ಚೊಚ್ಚಲ ಸಿಂಗಲ್ಸ್ಸ್ ಚಾಲೆಂಜರ್ ಟ್ರೋಫಿ ಹಾಗೂ ಐಟಿಎಫ್ ಫ್ಯೂಚರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

28ರ ಹರೆಯದ ಪ್ರಜ್ಞೇಶ್ ಸ್ಟಟ್‌ಗರ್ಟ್‌ನಲ್ಲಿ ನಡೆಯಲಿರುವ ಎಟಿಪಿ ವರ್ಲ್ಡ್ ಟೂರ್ ಇವೆಂಟ್‌ಗೆ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ರಾಮ್‌ಕುಮಾರ್ ರಾಮನಾಥನ್ 7 ಸ್ಥಾನ ಕಳೆದುಕೊಂಡು 128ನೇ ಸ್ಥಾನ ತಲುಪಿದ್ದಾರೆ. ಯುವ ಆಟಗಾರ ಸುಮಿತ್ ನಗಾಲ್ 14 ಸ್ಥಾನ ಕಳೆದುಕೊಂಡು 234ನೇ ಸ್ಥಾನದಲ್ಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಎರಡು ಸ್ಥಾನ ಭಡ್ತಿ ಪಡೆದು 22ನೇ ರ್ಯಾಂಕಿನಲ್ಲಿದ್ದಾರೆ. ಆ ಬಳಿಕ ಡಿವಿಜ್ ಶರಣ್(43), ಲಿಯಾಂಡರ್ ಪೇಸ್(59) ಹಾಗೂ ಪೂರವ್ ರಾಜಾ(77) ಅವರಿದ್ದಾರೆ.

ವಿಷ್ಣುವರ್ಧನ್ ಎರಡು ಸ್ಥಾನ ಮೇಲಕ್ಕೇರಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದಾರೆ. ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ಅಂಕಿತಾ ರಾಣಾ ಭಾರತದ ನಂ.1 ಆಟಗಾರ್ತಿ(203)ಯಾಗಿ ಮುಂದುವರಿದಿದ್ದಾರೆ. ಕರ್ಮಾನ್ ಕೌರ್(262), ಪ್ರಾಂಜಲಾ(393) ಹಾಗೂ ಋತುರಾಜ್ ಭೋಂಸ್ಲೆ (403) ಆ ನಂತರದ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News