ಅರ್ಹ ಕೃಷಿಕರಿಗಷ್ಟೇ ಸಾಲ ಮನ್ನಾ ಆಗಲಿ

Update: 2018-06-11 18:15 GMT

ಮಾನ್ಯರೇ,

ಮಾನ್ಯ ಮುಖ್ಯಮಂತ್ರಿಗಳು ಕೃಷಿ ಸಾಲ ಮನ್ನಾದ ಕುರಿತು ಯೋಜನೆ ರೂಪಿಸುವುದರ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಯೋಜನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದರೆ ಮಾತ್ರ ಈ ಯೋಜನೆ ಜನಪರವಾದೀತು. ಇಂದು ಎಕರೆಗಟ್ಟಲೆ ಆಸ್ತಿಪಾಸ್ತಿ ಹೊಂದಿದ್ದು, ವಾಣಿಜ್ಯ ಬೆಳೆ ಬೆಳೆದು ಅತ್ಯಧಿಕ ಲಾಭ ಗಳಿಸುವ ಶ್ರೀಮಂತರೂ ಕೃಷಿಕರೇ ಆಗಿದ್ದಾರೆ. ಕೃಷಿಕರ ಹೆಸರಿನಲ್ಲಿ ಪ್ರತೀ ಎಕರೆಗೆ 60,000 ರೂ.ನಂತೆ ಶೂನ್ಯಬಡ್ಡಿಯಲ್ಲಿ ಸಾಲ ಪಡೆದು, ಅದೇ ಬ್ಯಾಂಕ್ ಅಥವಾ ಬೇರೆ ಬ್ಯಾಂಕ್‌ಗಳಲ್ಲಿ ಬಡ್ಡಿಗಾಗಿ ಠೇವಣಿ ಇಡುವವರೂ ಇದ್ದಾರೆ. ಹೀಗಾಗಿ ಆಹಾರ ಬೆಳೆಗಳನ್ನು ಬಿಟ್ಟು, ಅಡಿಕೆ, ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವುದರಲ್ಲಿ ಅರ್ಥವಿಲ್ಲ.

ಕರ್ನಾಟಕದಲ್ಲಿರುವ ಆರೂವರೆ ಕೋಟಿ ಜನರಲ್ಲಿ ಬಿಪಿಎಲ್ ಕಾರ್ಡುಗಳಿರುವ ನಾಲ್ಕೈದು ಕೋಟಿ ಕಡು ಬಡವರು ಇರಬಹುದು. ಕೃಷಿಕರ ಹೆಸರಿನಲ್ಲಿ ಎಲ್ಲರಿಗೂ ಸಾಲ ಮನ್ನಾ ಮಾಡುವ ಬದಲು ಬಿಪಿಎಲ್ ಕಾರ್ಡು ಹೊಂದಿರುವ ಕಡುಬಡವರ ಮನೆಯ ನೀರಿನ ಬಿಲ್ಲಿನಲ್ಲಿ ಸ್ವಲ್ಪವ್ಯತ್ಯಾಸ ತರಬಹುದು. ಅಲ್ಲದೆ ರಾಜ್ಯದಾದ್ಯಂತ ಎಲ್ಲರಿಗೂ ನಿಯಮಿತವಾಗಿ ಪ್ರತೀದಿನ ನೀರನ್ನು ಕೊಟ್ಟರೆ ಅನ್ನಭಾಗ್ಯದಂತೆ ನೀರು ಭಾಗ್ಯ ಕೂಡಾ ಜನರಿಗೆ ಸಿಗುತ್ತದೆ

ಹಾಗಾಗಿ ಈಗಿನ ಮುಖ್ಯಮಂತ್ರಿಗಳು, ಹಿಂದಿನ ಮುಖ್ಯಮಂತ್ರಿಗಳಲ್ಲಿ ಕೆಲವರು ಮಾಡಿದ ಸಾಲಮನ್ನಾದ ತಪ್ಪನ್ನು ಅನುಕರಿಸದೆ ಅರ್ಹರಿಗೆ ಮಾತ್ರ ಸಾಲಮನ್ನಾ ಮಾಡುವುದಲ್ಲದೆ ಇನ್ನಿತರ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ರೂಪಿಸಲಿ.

- ಕೆ. ಹನೀಫ್, ಮಂಗಳೂರು

Writer - - ಕೆ. ಹನೀಫ್, ಮಂಗಳೂರು

contributor

Editor - - ಕೆ. ಹನೀಫ್, ಮಂಗಳೂರು

contributor

Similar News