ಪಿಂಚಣಿ ಪರಿಮಿತಿ 10,000 ರೂ.ಗೆ ಹೆಚ್ಚಿಸಲು ಸರಕಾರದ ಚಿಂತನೆ
ಹೊಸದಿಲ್ಲಿ, ಜೂ.12: ಅಟಲ್ ಪೆನ್ಷನ್ ಯೋಜನೆ(ಎಪಿವೈ)ಯಡಿ ಪಿಂಚಣಿ ಪರಿಮಿತಿಯನ್ನು ತಿಂಗಳಿಗೆ 10,000 ರೂ.ಗೆ ಹೆಚ್ಚಿಸಬೇಕು ಎಂಬ ಪ್ರಸ್ತಾವನೆಯನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಿಂಚಣಿ ಪರಿಮಿತಿ ಈಗ ತಿಂಗಳಿಗೆ 5,000 ರೂ. ಇದ್ದು ಇದನ್ನು 10,000 ರೂ.ಗೆ ಹೆಚ್ಚಿಸಬೇಕು ಎಂದು ‘ಪೆನ್ಷನ್ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ(ಪಿಎಫ್‌ಆರ್‌ಡಿಎ)’ ಸಲ್ಲಿಸಿರುವ ಪ್ರಸ್ತಾವನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹಣಕಾಸು ಸೇವಾ ವಿಭಾಗದ ಜಂಟಿ ಕಾರ್ಯದರ್ಶಿ ಮದನೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ 1,000 ರೂ.ನಿಂದ 5,000 ರೂ.ವರೆಗೆ ಐದು ಹಂತದ ಪೆನ್ಷನ್ ಶ್ರೇಣಿಗಳಿವೆ. ಆದರೆ ಹಲವರು ಈ ಮೊತ್ತ ಕಡಿಮೆಯಾಗುತ್ತದೆ ಎಂದು ದೂರಿದ್ದಾರೆ. ಮುಂದಿನ 20ರಿಂದ 30 ವರ್ಷದಲ್ಲಿ ಹಾಲಿ ಉದ್ಯೋಗಿಗಳು 60 ವರ್ಷ ದಾಟಿ ನಿವೃತ್ತರಾಗುತ್ತಾರೆ. ಆಗ ಈ ಮೊತ್ತ ಏನೇನೂ ಸಾಲದು ಎಂಬ ದೂರು ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪಿಂಚಣಿ ಮಿತಿಯನ್ನು 10,000 ರೂ.ಗೆ ಹೆಚ್ಚಿಸಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಿಎಫ್‌ಆರ್‌ಡಿಎ ಅಧ್ಯಕ್ಷ ಹೇಮಂತ್ ಜಿ.ಕಂಟ್ರಾಕ್ಟರ್ ತಿಳಿಸಿದ್ದಾರೆ.
ಎಪಿವೈ ಯೋಜನೆಗೆ ಸ್ವಯಂ ದಾಖಲಾತಿ ಹಾಗೂ ಯೋಜನೆಗೆ ಸೇರ್ಪಡೆಗೊಳ್ಳಲು ಗರಿಷ್ಟ ವಯೋಮಿತಿಯನ್ನು 50 ವರ್ಷಕ್ಕೆ ಹೆಚ್ಚಿಸಬೇಕು ಎಂಬ ಎರಡು ಪ್ರಸ್ತಾವನೆಗಳನ್ನೂ ಸಚಿವಾಲಯಕ್ಕೆ ಪಿಎಫ್‌ಆರ್‌ಡಿಎ ಸಲ್ಲಿಸಿದೆ. ಈಗ 18ರಿಂದ 40 ವರ್ಷದವರು ಎಪಿವೈ ಯೋಜನೆಗೆ ಸದಸ್ಯರಾಗಬಹುದು. ವಯೋಮಿತಿಯನ್ನು 18ರಿಂದ 50 ವರ್ಷಕ್ಕೆ ಹೆಚ್ಚಿಸಿದರೆ ಹೆಚ್ಚಿನ ಚಂದಾದಾರರು ಸೇರ್ಪಡೆಗೊಳ್ಳಲು ಅವಕಾಶವಾಗಲಿದೆ. ಎಪಿವೈ ಯೋಜನೆಯಲ್ಲಿ ಹಾಲಿ 1.02 ಕೋಟಿ ಚಂದಾದಾರರಿದ್ದಾರೆ. 2017-18ರಲ್ಲಿ ಸುಮಾರು 50 ಲಕ್ಷ ಹೆಚ್ಚುವರಿ ಚಂದಾದಾರರು ಸೇರ್ಪಡೆಗೊಂಡಿದ್ದರೆ, ಹಾಲಿ ಆರ್ಥಿಕ ವರ್ಷದಲ್ಲಿ ಸುಮಾರು 60-70 ಲಕ್ಷ ಹೊಸ ಚಂದಾದಾರರು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಕಂಟ್ರಾಕ್ಟರ್ ತಿಳಿಸಿದ್ದಾರೆ.