ಎಟಿಎಂ ಮೆಶಿನ್ ಒಳಗಿದ್ದ 12 ಲಕ್ಷ ರೂ. ಮೌಲ್ಯದ ನೋಟುಗಳನ್ನು ಹರಿದು ಚೂರಾಗಿಸಿದ ಇಲಿಗಳು!

Update: 2018-06-19 09:01 GMT

ಗುವಹಾಟಿ, ಜೂ.19:  ಅಸ್ಸಾಂನ ತಿನ್ಸುಕಿಯ ಜಿಲ್ಲೆಯಲ್ಲಿನ ಲಾಯ್ಪುಲಿ ಎಂಬಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಮಶೀನಿನೊಳಗಿದ್ದ ಸುಮಾರು 12 ಲಕ್ಷ  ರೂ. ಮೌಲ್ಯದ ನೋಟುಗಳನ್ನು ಇಲಿಗಳು ಹರಿದು ಚೂರಾಗಿಸಿವೆ.

ಮೇ 20ರಿಂದ ಈ ಎಟಿಎಂ ಅನ್ನು ತಾಂತ್ರಿಕ ವೈಫಲ್ಯದ ಕಾರಣದಿಂದ ಮುಚ್ಚಲಾಗಿತ್ತು. ಆದರೆ ಈ ಎಟಿಎಂ ಕೇಂದ್ರದ ಮುಚ್ಚಿದ ಬಾಗಿಲುಗಳ ಒಳಗೆ ಇಲಿಗಳ ದರ್ಬಾರು ಪ್ರತಿದಿನ ನಡೆಯುತ್ತಿತ್ತು. ಜೂನ್ 11ರಂದು ಎಟಿಎಂ ಮಶೀನಿನ ದುರಸ್ತಿಗೆಂದು ಕೆಲ ಮಂದಿ ಒಳಕ್ಕೆ ಹೋಗಿ ಮಶೀನನ್ನು ಬಿಚ್ಚಿದಾಗ ಒಳಗೆ ರಾಶಿ ರಾಶಿ ನೋಟಿನ ಚೂರುಗಳ ದರ್ಶನ ಅವರಿಗಾಗಿತ್ತು.

ಬ್ಯಾಂಕ್ ಅಧಿಕಾರಿಗಳ ಪ್ರಕಾರ ರೂ 12,38,000 ಮೌಲ್ಯದ ನೋಟುಗಳನ್ನು ಇಲಿಗಳು ನಾಶಪಡಿಸಿವೆ. ಮೇ 19ರಂದು ಗುವಾಹಟಿ ಮೂಲದ ಕಂಪೆನಿ ಎಫ್‍ಐಎಸ್ ಗ್ಲೋಬಲ್ ಬಿಸಿನೆಸ್ ಸೊಲ್ಯೂಶನ್ಸ್  29 ಲಕ್ಷ ರೂ.ಗಳನ್ನು ಮಶೀನಿನೊಳಗೆ  ಇರಿಸಿತ್ತು. ಮರು ದಿನ ಎಟಿಎಂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಒಟ್ಟು ಹಣದಲ್ಲಿ ಸುಮಾರು ರೂ 17 ಲಕ್ಷ ಮೌಲ್ಯದ ನೋಟುಗಳು ಉತ್ತಮ ಸ್ಥಿತಿಯಲ್ಲಿದ್ದು ಉಳಿದವುಗಳು ಹೇಳಹೆಸರಿಲ್ಲದಂತಾಗಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News