‘ಮುಸ್ಲಿಮರು ವಿದ್ಯುತ್ ಕಳ್ಳತನ ಮಾಡುತ್ತಾರೆ’ ಎಂದ ಬಿಜೆಪಿ ಶಾಸಕ !

Update: 2018-06-19 15:15 GMT

ಲಕ್ನೋ,ಜು.19: ವಿದ್ಯುಚ್ಛಕ್ತಿ ಇಲಾಖೆಯ ಅಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ ಕೌಶಾಂಬಿ ಜಿಲ್ಲೆಯ ಬಿಜೆಪಿ ಶಾಸಕ ಸಂಜಯ ಗುಪ್ತಾ ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಆರೋಪ ಮಾಡಿದ ಆಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿದ್ಯುತ್ ಕಳ್ಳತನಕ್ಕಾಗಿ ಮುಸ್ಲಿಮರ ವಿರುದ್ಧ ಕ್ರಮವನ್ನೇಕೆ ಕೈಗೊಂಡಿಲ್ಲ ಎಂದು ಅವರು ಅಧಿಕಾರಿಯನ್ನು ಬೆದರಿಸುತ್ತಿರುವುದು ಆಡಿಯೋದಲ್ಲಿ ಕೇಳಿಬಂದಿದೆ.

ವಿದ್ಯುಚ್ಛಕ್ತಿ ಇಲಾಖೆಯ ಇಂಜಿನಿಯರ್ ಅವಿನಾಶ ಸಿಂಗ್ ಅವರು ಶಾಸಕರು ತನ್ನೊಂದಿಗೆ ನಡೆಸಿದ ಸಂಭಾಷಣೆಯನ್ನು ಧ್ವನಿಮುದ್ರಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಪೋಸ್ಟ್ ಮಾಡಿದ್ದಾರೆ.

“ಎ.1ರಿಂದ ನೀವು ಎಷ್ಟು ಮುಸ್ಲಿಮರ ವಿರುದ್ಧ ಕ್ರಮ ಕೈಗೊಂಡಿದ್ದೀರಿ ಎನ್ನುವ ಬಗ್ಗೆ ವಿವರಗಳನ್ನು ನೀಡಿ. ನೀವು ವರ್ಗಾವಣೆ ಪಡೆದರೂ ಬಚಾವ್ ಆಗುವುದಿಲ್ಲ. ನೀವು ಉತ್ತರ ಪ್ರದೇಶದಲ್ಲಿ ಎಲ್ಲಿದ್ದರೂ ನಿಮ್ಮ ವಿರುದ್ಧ ತನಿಖೆ ನಡೆಯುವಂತೆ ಮಾಡುತ್ತೇನೆ. ಮುಸ್ಲಿಮರ ಬಡಾವಣೆಗೆ ಹೋಗಿ ಅಲ್ಲಿ ಎಷ್ಟು ವಿದ್ಯುತ್ ಕಳ್ಳತನ ನಡೆಯುತ್ತಿದೆ ಎನ್ನುವುದನ್ನು ನೋಡಿ” ಎಂದು ಗುಪ್ತಾ ಫೋನಿನಲ್ಲಿ ಕೂಗಾಡಿದ್ದಾರೆ. ಅವರನ್ನು ಸಮಾಧಾನಿಸಲು ಸಿಂಗ್ ನಡೆಸಿದ ಪ್ರಯತ್ನಗಳು ವಿಫಲಗೊಂಡಿದ್ದವು.

“ನೀವು ಮತ್ತು ನಿಮ್ಮ ಇಲಾಖೆ ಹಾಳಾಗಲಿ,ನಾನು ನೇರ ಸರಕಾರಕ್ಕೇ ದೂರಿಕೊಳ್ಳುತ್ತೇನೆ. ನೀವು ಉದ್ದೇಶಪೂರ್ವಕವಾಗಿ ಹಿಂದುಗಳಿಗೆ,ವ್ಯಾಪಾರಿಗಳಿಗೆ ಮಾತ್ರ ಕಿರುಕುಳ ನೀಡುತ್ತಿದ್ದೀರಿ’’ ಎಂದು ಗುಪ್ತಾ ಹಾರಾಡಿದ್ದಾರೆ.

ಜೂನ್ 15ರಂದು,ವಿದ್ಯುಚ್ಛಕ್ತಿ ಇಲಾಖೆಯು ವಿದ್ಯುತ್ ಕಳ್ಳತನದ ಶಂಕೆಯ ಮೇಲೆ ವ್ಯಾಪಾರಿಗಳ ಮೆಲೆ ಸರಣಿ ದಾಳಿಗಳನ್ನು ನಡೆಸಿದ ಬಳಿಕ ಗುಪ್ತಾ ಸಿಂಗ್‌ಗೆ ಈ ಕರೆಯನ್ನು ಮಾಡಿದ್ದರು. ದಾಳಿಗಳ ಬಳಿಕ ವಿದ್ಯುತ್ ಕಳ್ಳತನಕ್ಕಾಗಿ ಏಳು ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿತ್ತು.

ತಾನು ಸಿಂಗ್‌ಗೆ ದೂರವಾಣಿ ಕರೆ ಮಾಡಿದ್ದನ್ನು ಒಪ್ಪಿಕೊಂಡಿರುವ ಗುಪ್ತಾ,ತನಗೆ ಲಭ್ಯವಾಗಿರುವ ಅಂಕಿಅಂಶಗಳ ಆಧಾರದಲ್ಲಿ ಪ್ರಾಮಾಣಿಕವಾದ ದೂರನ್ನು ತಾನು ಪ್ರಸ್ತಾಪಿಸಿದ್ದೆ. ನೀವು ಹಿಂದುಗಳ ಮನೆಗಳಿಗೆ ಮಾತ್ರವಲ್ಲ,ಮುಸ್ಲಿಮರ ಮನೆಗಳಿಗೂ ಹೋಗಿ ತಪಾಸಣೆ ನಡೆಸಬೇಕು ಎಂದು ತಾನು ಅಧಿಕಾರಿಗಳಿಗೆ ತಿಳಿಸಿದ್ದೆ ಎಂದು ಪ್ರತಿಪಾದಿಸಿದ್ದಾರೆ.

ನೀವು ಎಲ್ಲ ಸಮುದಾಯಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಒಂದು ಸಮುದಾಯದ ವಿರುದ್ಧ ಮಾತ್ರ ಕಾರ್ಯಾಚರಿಸಿದರೆ ಜನರು ತನ್ನನ್ನು ಸುಮ್ಮನೆ ಬಿಡುತ್ತಾರೆಯೇ ಎಂದೂ ಅವರು ಅಧಿಕಾರಿಯನ್ನು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News