ಮಂದಸೌರ್ ರೈತರ ಸಾವುಗಳ ಪ್ರಕರಣ: ಪೊಲೀಸರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದರು ಎಂದ ತನಿಖಾ ವರದಿ

Update: 2018-06-19 15:16 GMT

ಭೋಪಾಲ, ಜೂ.19: ಕಳೆದ ವರ್ಷದ ಜೂನ್ 6ರಂದು ಮಧ್ಯಪ್ರದೇಶದ ಮಂದಸೌರ್‌ನಲ್ಲಿ ನಡೆದಿದ್ದ ರೈತರ ಪ್ರತಿಭಟನೆಗಳ ಸಂದರ್ಭ ಪೊಲೀಸರು ಆತ್ಮರಕ್ಷಣೆಗಾಗಿ ಗೋಲಿಬಾರ್ ನಡೆಸಿದ್ದರು ಎಂದು ರಾಜ್ಯ ಸರಕಾರವು ಆದೇಶಿಸಿದ್ದ ತನಿಖಾ ವರದಿಯು ಹೇಳಿದೆ. ಗೋಲಿಬಾರ್‌ನಲ್ಲಿ ಐವರು ರೈತರು ಮೃತಪಟ್ಟಿದ್ದರು. ಪೊಲೀಸರ ಕ್ರಮವು ಅಗತ್ಯವಾಗಿತ್ತು ಮತ್ತು ಕಾನೂನುಬದ್ಧವಾಗಿತ್ತು ಎಂದು ಅದು ತಿಳಿಸಿದೆ.

ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳು ಮತ್ತು ಸಾಲಮನ್ನಾ ಬೇಡಿಕೆಗಳನ್ನು ಮುಂದಿರಿಸಿಕೊಂಡು ರೈತರು ನಡೆಸಿದ್ದ ಪ್ರತಿಭಟನೆಯು ಪೊಲೀಸರ ಗೋಲಿಬಾರ್‌ನೊಂದಿಗೆ ಹಿಂಸೆಗೆ ತಿರುಗಿತ್ತು. ಈ ಸಂಬಂಧ ಪೊಲೀಸರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿರಲಿಲ್ಲ. ಈ ಬಗ್ಗೆ ಸರಕಾರವು ನಿವೃತ್ತ ನ್ಯಾಯಾಧೀಶ ಎ.ಕೆ.ಜೈನ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿತ್ತು.

ಐವರು ರೈತರು ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದನ್ನು ಮೊದಲು ಬಲವಾಗಿ ನಿರಾಕರಿಸಿದ್ದ ರಾಜ್ಯ ಸರಕಾರವು ಬಳಿಕ ಅದನ್ನು ಒಪ್ಪಿಕೊಂಡಿತ್ತು.

ಪೊಲೀಸರ ದೌರ್ಜನ್ಯಗಳಿಂದ ಗಾಯಗೊಂಡಿದ್ದ ಎನ್ನಲಾಗಿದ್ದ ಇನ್ನೋರ್ವ ವ್ಯಕ್ತಿ ಮರುದಿನ ಸಾವನ್ನಪ್ಪಿದ್ದ.

ಘಟನೆಗೆ ಹೊಣೆಯಾದವರನ್ನು ದಂಡಿಸಲಾಗುವುದು ಎಂದು ರಾಜ್ಯದ ಗೃಹಸಚಿವ ಭೂಪೇಂದ್ರ ಸಿಂಗ್ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News