ಜನನಾಯಕರೇ ನಿಯಮಗಳನ್ನು ಮುರಿದರೆ...
ಮಾನ್ಯರೇ,
ವಿಧಾನ ಮಂಡಲ ಜಂಟಿ ಅಧಿವೇಶನವು ಸದನದ ಪ್ರತಿಪಕ್ಷಗಳ ಜಿದ್ದಾ-ಜಿದ್ದಿನ ಕದನವಾಗಿ ಏರ್ಪಟ್ಟಿದೆ. ಇದು ಸರ್ವೇಸಾಮಾನ್ಯ. ಆದರೆ ಸದನಕ್ಕೆ ತನ್ನದೇ ಆದ ನೀತಿ ನಿಯಮಗಳು ಉಂಟು. ಆದರೆ ಅವು ಎಲ್ಲರಿಗೂ ಅನ್ವಯಿಸುವ ನಿಯಮಗಳೇ ಅಥವಾ ಸೀಮಿತ ಸಮೂಹಕ್ಕೆ ಅಳವಡಿಸಿದ ನಿಯಮಗಳೇ ಎಂಬುದರ ಬಗ್ಗೆ ಚರ್ಚಿಸುವಂತಹ ಸಂದರ್ಭ ಏರ್ಪಟ್ಟಿದೆ.
ಅಧಿವೇಶನದಲ್ಲಿ ಜನಪತಿನಿಧಿಗಳಲ್ಲದೆ, ವರದಿಮಾಡಲು ಮಾಧ್ಯಮದವರು, ವೀಕ್ಷಣೆಗೆಂದು ಸಾರ್ವಜನಿಕರು, ವಿದ್ಯಾರ್ಥಿಗಳು, ಗಣ್ಯ ವ್ಯಕ್ತಿಗಳು ಬರುತ್ತಾರೆ. ಸದನದಲ್ಲಿ ಮೊಬೈಲ್‌ನ್ನು ತೆಗೆದುಕೊಂಡು ಹೋಗಕೂಡದು ಎಂಬ ನಿಯಮ, ಶಿಸ್ತು ಕಾಪಾಡುವುದು, ಅಧಿವೇಶನದ ಸಂದರ್ಭದಲ್ಲಿ ಶಾಂತ ರೀತಿಯಲ್ಲಿ ವರ್ತಿಸುವುದು, ತಮ್ಮ ಆಸನದಲ್ಲಿಯೇ ಕುಳಿತುಕೊಳ್ಳುವುದು, ಸಭಾಪತಿಯ ಅಪ್ಪಣೆ ಮೇರೆಗೆ ಸದನದ ಸದಸ್ಯರು ಎದ್ದು ನಿಂತು ಮಾತಾಡುವುದು... ಇನ್ನು ಹತ್ತು ಹಲವಾರು ನೀತಿ ನಿಯಮಗಳು ಇವೆ. ಆದರೆ, ಈ ನಿಯಮಗಳು ಸಚಿವರು, ಶಾಸಕರಿಗೆ ಅನ್ವಯಿಸದ ರೀತಿಯಲ್ಲಿ ಜನಪ್ರತಿನಿಧಿಗಳು ವರ್ತಿಸುತ್ತಿರುವುದು ಕಡೆಗಣಿಸುವಂತಹ ವಿಷಯವಲ್ಲ. ನಿಯಮವೆಂದರೆ ಎಲ್ಲರೂ ಪಾಲಿಸಲೇ ಬೇಕು. ಸಾರ್ವಜನಿಕರಿಗೆ ಸದನದ ವಿಚಾರಗಳನ್ನು ಬರೆಯಲು ಪೆನ್ನಿಗೂ ಅವಕಾಶ ನೀಡದ ನಿಯಮಗಳು. ಜನ ಪ್ರತಿನಿಧಿಗಳಿಗೆ ಮೊಬೈಲಿನ ಬಳಕೆಗೆ ಅವಕಾಶ ನೀಡುತ್ತಿರುವುದು ವಿಪರ್ಯಾಸದ ಸಂಗತಿ.
ನಿಯಮಗಳಿಗೆ ಎಲ್ಲರೂ ಬದ್ಧವಾಗಿದ್ದರೆ ಅದು ಕಾನೂನಿಗೆ ಸಲ್ಲಿಸುವ ಗೌರವ. ಇದರ ಕಡೆಗೆ ಜನಪ್ರತಿನಿಧಿಗಳು ಗಮನ ಹರಿಸಿದರೆ ಸೂಕ್ತ. ಇಲ್ಲವಾದರೆ, ಜನರಲ್ಲಿ ನಿಯಮಗಳ ಪಾಲನೆಯ ಬಗ್ಗೆ ಗೊಂದಲ ಮೂಡುತ್ತದೆ. ಜನಪ್ರತಿನಿಧಿಗಳಿಂದಲೇ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೆ ಬೇರೆಯವರನ್ನು ದೂರಿ ಏನು ಪ್ರಯೋಜನ? ಜನಪ್ರತಿನಿಧಿಗಳೇ, ಜನ ಸಾಮಾನ್ಯರು ನಿಮ್ಮನ್ನು ನೋಡಿ ಅನುಸರಿಸುವ ನಿಟ್ಟಿನಲ್ಲಿ ನಿಮ್ಮ ನಡೆ-ನುಡಿ ಸಾಗಲಿ.
-ವೀರೇಶ್ ಗಂಗಾವತಿ