×
Ad

ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ

Update: 2018-07-06 23:58 IST

ಮಾನ್ಯರೇ,

ನೀಟ್ ಪ್ರವೇಶ ಪರೀಕ್ಷೆ ಬರೆದು, ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಿರುವ ಖಾಸಗಿ ಸೀಟುಗಳನ್ನು ಪಡೆಯಲು ಅರ್ಹರಾಗಿರುವ ಹಲವು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೊಸ ನಿಯಮದಿಂದಾಗಿ ಅವಕಾಶ ವಂಚಿತರಾಗಿರುತ್ತಾರೆ. ಪ್ರಾಧಿಕಾರವೇ ತನ್ನ ಮಾಹಿತಿ ಕೈಪಿಡಿಯಲ್ಲಿ ಹೇಳಿಕೊಂಡಂತೆ, ಒಂದು ವರ್ಷವೂ ರಾಜ್ಯದಲ್ಲಿ ವ್ಯಾಸಂಗ ಮಾಡದ ಕರ್ನಾಟಕೇತರ ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳೂ ಈ ಕೋಟಾ ಸೀಟುಗಳನ್ನು ಪಡೆಯಬಹುದಾಗಿದೆ.

ಆದರೆ, ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಈ ಅರ್ಹತೆ ಪಡೆಯಲು ಕನಿಷ್ಠ 10 ವರ್ಷ ಕರ್ನಾಟಕದಲ್ಲೇ ವ್ಯಾಸಂಗ ಮಾಡಿರಬೇಕೆಂಬ ಹೊಸ ನಿಯಮವು ಹಾಸ್ಯಾಸ್ಪದವಾಗಿದೆ. ಮಾತ್ರವಲ್ಲ, ಮೀಸಲಾತಿ ವಿಭಾಗದ 2ಬಿ/3ಬಿ ಪ್ರವರ್ಗಗಳ ಸರಕಾರಿ ಕೋಟಾದ ಸೀಟುಗಳನ್ನು ಪಡೆಯುವ ಅರ್ಹತೆಯನ್ನು ನೀಡಿರುವ ವಿದ್ಯಾರ್ಥಿಗಳಿಗೂ ಅಲ್ಪಸಂಖ್ಯಾತ ಕೋಟಾದ ಖಾಸಗಿ ಸೀಟುಗಳನ್ನು ಪಡೆಯುವ ಅರ್ಹತೆಯನ್ನು ನಿರಾಕರಿಸುತ್ತಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ತಪ್ಪು/ದ್ವಿಮುಖ ಧೋರಣೆಯನ್ನು ಸಾಬೀತುಪಡಿಸುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಕರ್ನಾಟಕ ಸರಕಾರದ ವೈದ್ಯಕೀಯ, ಉನ್ನತ ಶಿಕ್ಷಣ, ಅಲ್ಪಸಂಖ್ಯಾತ ಕಲ್ಯಾಣ ಸಚಿವರುಗಳಿಗೆ ಈ ಕುರಿತಂತೆ ದೂರು ನೀಡಿದ್ದರೂ, ಈ ತನಕ ಯಾರೂ ತುಟಿ ಬಿಚ್ಚಿಲ್ಲ. ವಿದ್ಯಾರ್ಥಿಪರ, ನ್ಯಾಯದ ಪರ, ಸಮುದಾಯ ಪರ ಹೋರಾಟ ನಡೆಸುವವರು ದಯವಿಟ್ಟು ಈ ಸಮಸ್ಯೆಗೆ ಸ್ಪಂದಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿ.

-ಉಮರ್ ಯು. ಎಚ್. ಸ್ಥಾಪಕಾಧ್ಯಕ್ಷ, ಕರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್ಮೇಶನ್ ಸೆಂಟರ್, ಮಂಗಳೂರು

Writer - ಉಮರ್ ಯು. ಎಚ್

contributor

Editor - ಉಮರ್ ಯು. ಎಚ್

contributor

Similar News