ಘರ್ಷಣೆಗೆ ತಿರುಗಿದ ಫ್ರಾನ್ಸ್ ಗೆಲುವಿನ ಸಂಭ್ರಮ

Update: 2018-07-11 18:23 GMT

ಪ್ಯಾರಿಸ್, ಜು.11: ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಫೈನಲ್‌ಗೆ ತೇರ್ಗಡೆಯಾದ ಹಿನ್ನೆಲೆಯಲ್ಲಿ ಪ್ಯಾರಿಸ್‌ನಲ್ಲಿ ಸುಡುಮದ್ದುಗಳನ್ನು ಸಿಡಿಸುವುದರೊಂದಿಗೆ ಭಾರೀ ಸಂಭ್ರಮಾಚರಣೆ ನಡೆಸಲಾಯಿತು. ಈ ವೇಳೆ 12ಕ್ಕೂ ಅಧಿಕ ಅಭಿಮಾನಿಗಳು ಪ್ಯಾರಿಸ್‌ನ ಬೀದಿಯಲ್ಲಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಘಟನೆಯೂ ನಡೆದಿದೆ. ಫ್ರಾನ್ಸ್ ಫುಟ್ಬಾಲ್ ಅಭಿಮಾನಿಗಳು ಮಂಗಳವಾರ ರಾತ್ರಿ ಫ್ರಾನ್ಸ್ ಹಾಗೂ ಬೆಲ್ಜಿಯಂ ನಡುವೆ ನಡೆದ ಸೆಮಿ ಫೈನಲ್ ಪಂದ್ಯವನ್ನು ದೈತ್ಯ ಪರದೆಯಲ್ಲಿ ವೀಕ್ಷಿಸಿದ್ದರು. ಫ್ರಾನ್ಸ್ ತಂಡ 1-0 ಅಂತರದಿಂದ ಗೆಲುವು ದಾಖಲಿಸಿದ ಬೆನ್ನಿಗೆ ಸಿಟಿ ಹಾಲ್ ಹೊರಗಡೆ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ, ರಾಷ್ಟ್ರಧ್ವಜ ಬೀಸುತ್ತಾ ಗೆಲುವಿನ ಸಂಭ್ರಮ ಆಚರಿಸಿದರು. ನಗರದೆಲ್ಲೆಡೆಯ ಬೀದಿಗಳಲ್ಲಿ ಫುಟ್ಬಾಲ್ ಅಭಿಮಾನಿಗಳು ಜಮಾಯಿಸಿ ವಿಜಯೋತ್ಸವ ಆಚರಿಸಿದರು. ವಿಜಯೋತ್ಸವ ಘರ್ಷಣೆಗೆ ತಿರುಗಿದ್ದು ಪ್ಯಾರಿಸ್‌ನ ಚಾಂಪ್ಸ್ ಎಲಿಸೀ ಎವೆನ್ಯೂನಲ್ಲಿ ಪೊಲೀಸರ ಮೇಲೆ ಅಭಿಮಾನಿಗಳು ಕ್ಷಿಪಣಿಗಳನ್ನು ಎಸೆದರು. ಕೈಯಲ್ಲಿ ಬ್ಯಾರಿಕೇಡ್ ಹಿಡಿದುಕೊಂಡು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಪರಿಸ್ಥಿತಿ ನಿಯಂತ್ರಿಸಲು ಪ್ಯಾರಾ ಮಿಲಿಟರಿ ಪೊಲೀಸ್ ಪಡೆ, ಶಸ್ತ್ರಸಜ್ಜಿತ ಪೊಲೀಸರು ಅಶ್ರುವಾಯು ಸಿಡಿಸಿದರು ಎಂದು ಮಿರರ್ ವರದಿ ಮಾಡಿದೆ. ಪಂದ್ಯ ಕೊನೆಗೊಳ್ಳಲು 2 ನಿಮಿಷವಿರುವಾಗ ನಡೆದ ಕಾಲ್ತುಳಿತದಲ್ಲಿ 30 ಜನರಿಗೆ ಸಣ್ಣಪುಟದ್ಟ ಗಾಯವಾಗಿದೆ. ಪಟಾಕಿ ಸಿಡಿತದ ಶಬ್ದವನ್ನು ಗನ್ ಸಿಡಿತವೆಂದು ತಪ್ಪಾಗಿ ಭಾವಿಸಿದ ಕಾರಣ ಈ ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News