ಸಲಿಂಗ ಕಾಮ ‘ಅಪರಾಧ ಹಣೆಪಟ್ಟಿ’ಯಿಂದ ಕಳಚಿಕೊಂಡರೆ ಕಳಂಕದಿಂದಲೂ ಮುಕ್ತ: ಸುಪ್ರೀಂ
ಹೊಸದಿಲ್ಲಿ,ಜು.12: ಸಲಿಂಗ ಕಾಮಕ್ಕೆ ಅಪರಾಧ ಹಣೆಪಟ್ಟಿ ಅಂಟಿಕೊಂಡಿರುವದರಿಂದ ಸಲಿಂಗ ಕಾಮಿಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರ(ಎಲ್‌ಜಿಬಿಟಿ) ಸಮುದಾಯವು ಕೀಳರಿಮೆಯನ್ನು ಅನುಭವಿಸುತ್ತಿದೆ ಮತ್ತು ಈ ಹಣೆಪಟ್ಟಿಯು ಕಳಚಿಕೊಂಡರೆ ಈ ಕಳಂಕವು ಇರುವುದಿಲ್ಲ ಮತ್ತು ಅದು ತಾರತಮ್ಯದಿಂದ ಮುಕ್ತವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಹೇಳಿದರು.
ಭಾರತದಲ್ಲಿ ಸಲಿಂಗ ಕಾಮದ ಮೇಲಿನ 150 ವರ್ಷಗಳಷ್ಟು ಹಳೆಯದಾದ ನಿಷೇಧವು ಮುಂದುವರಿಯಬೇಕೇ ಎನ್ನುವುದನ್ನು ನಿರ್ಧರಿಸಲು ನಡೆಯುತ್ತಿರುವ ವಿಚಾರಣೆಯ ಮೂರನೇ ದಿನವಾದ ಗುರುವಾರ ನ್ಯಾಯಾಲಯವು ನಿಸರ್ಗದಲ್ಲಿಯ ಸಲಿಂಗಕಾಮವನ್ನು ಉದಾಹರಿಸಿತು. ಈ ನಿಷೇಧವು ಶೀಘ್ರ ತೆರವಾಗಬಹುದು ಎಂಬ ಸುಳಿವನ್ನು ಮು.ನ್ಯಾ.ಮಿಶ್ರಾ ಅವರು ಬುಧವಾರ ನೀಡಿದ್ದರು.
ಈ ಎಲ್ಲ ವರ್ಷಗಳಲ್ಲಿ ನಾವು ಭಾರತೀಯ ಸಮಾಜದಲ್ಲಿ ಸೃಷ್ಟಿಸಿರುವ ವಾತಾವರಣವು ಪರಸ್ಪರ ಒಪ್ಪಿಗೆಯ ಮೇರೆಗೆ ಸಲಿಂಗ ಕಾಮದಲ್ಲಿ ತೊಡಗುವ ಜನರ ವಿರುದ್ಧ ಆಳವಾಗಿ ಬೇರೂರಿರುವ ತಾರತಮ್ಯಕ್ಕೆ ಕಾರಣವಾಗಿದೆ ಮತ್ತು ಇದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಿದೆ ಎಂದು ಕಲಂ 377ರ ಸಾಂವಿಧಾನಿಕ ಸಿಂಧುತ್ವನ್ನು ನಿರ್ಧರಿಸಲು ವಿಚಾರಣೆ ನಡೆಸುತ್ತಿರುವ ಮು.ನ್ಯಾ.ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠವು ಹೇಳಿತು.
ತನಗಂಟಿಕೊಂಡಿರುವ ಕಳಂಕದಿಂದಾಗಿ ಎಲ್‌ಜಿಬಿಟಿ ಸಮುದಾಯವು ಮಾನಸಿಕ ಸಮಸ್ಯೆಗಳಿಂದ ನರಳುತ್ತಿದೆ. ಕೇವಲ ಕಲಂ 377ನ್ನು ರದ್ದುಗೊಳಿಸುವುದರಿಂದ ಉದ್ದೇಶವು ಈಡೇರುವುದಿಲ್ಲ ಎಂದು ಅರ್ಜಿದಾರರಲ್ಲೋರ್ವರ ಪರ ವಕೀಲ ಸಿ.ಯು.ಸಿಂಗ್ ಹೇಳಿದ ಬಳಿಕ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ನಿಸರ್ಗದಲ್ಲಿ ಪ್ರಕೃತಿ ಮತ್ತು ವಿಕೃತಿ ಒಟ್ಟಾಗಿ ಅಸ್ತಿತ್ವದಲ್ಲಿವೆ ಮತ್ತು ಸಲಿಂಗ ಕಾಮದಲ್ಲಿ ತೊಡಗುವ ನೂರಾರು ಪ್ರಾಣಿಜಾತಿಗಳಿವೆ ಎಂದು ಹೇಳಿದ ನ್ಯಾ.ಇಂದು ಮಲೋತ್ರಾ ಅವರು,ವೈದ್ಯಕೀಯ ಸಮುದಾಯದಲ್ಲಿನ ಹಿಂಜರಿಕೆಯಿಂದಾಗಿ ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯೂ ದೊರೆಯುತ್ತಿಲ್ಲ ಎಂದು ಬೆಟ್ಟು ಮಾಡಿದರು.