ಐಆರ್‌ಬಿ ದೈಹಿಕ ಅರ್ಹತೆ ಪರೀಕ್ಷೆ ಸಂದರ್ಭ ಓರ್ವ ಅಭ್ಯರ್ಥಿ ಸಾವು,ನಾಲ್ವರು ಅಸ್ವಸ್ಥ
ಜಮಶೇದಪುರ,ಜು.12: ಗುರುವಾರ ಇಲ್ಲಿಯ ಸಿದ್ಗೋರಾ ಪ್ರದೇಶದಲ್ಲಿಯ ಜೆಎಪಿ ಮೈದಾನದಲ್ಲಿ ಇಂಡಿಯಾ ರಿಝರ್ವ್ ಬೆಟಾಲಿಯನ್(ಐಬಿಆರ್)ಗೆ ಸೇರ್ಪಡೆಗಾಗಿ ನಡೆದ ದೈಹಿಕ ಅರ್ಹತೆ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಓರ್ವ ಅಭ್ಯರ್ಥಿ ಮೃತಪಟ್ಟಿದ್ದು,ಇತರ ನಾಲ್ವರು ಅಸ್ವಸ್ಥಗೊಂಡಿದ್ದಾರೆ.
10 ಕಿ.ಮೀ.ಓಟದ ಸಂದರ್ಭದಲ್ಲಿ ಬೊಕಾರೊ ನಿವಾಸಿ ರಾಜೇಶ್ ಕುಮಾರ್ ಶಾ ಸೇರಿದಂತೆ ಐವರು ಬವಳಿ ಬಂದು ಬಿದ್ದಿದ್ದು,ಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಉಳಿದ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಸ್‌ಪಿ ಪ್ರಭಾತ ಕುಮಾರ ತಿಳಿಸಿದರು. ಅಭ್ಯರ್ಥಿಗಳು ಒಂದು ಗಂಟೆಯಲ್ಲಿ 10 ಕಿ.ಮೀ.ಕ್ರಮಿಸಬೇಕಿತ್ತು.
ಶಾ ಅಸ್ವಸ್ಥಗೊಳ್ಳಲು ನಿರ್ಜಲೀಕರಣ ಕಾರಣವಾಗಿರಬಹುದು,ಆದರೆ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕವೇ ತಿಳಿದು ಬರಬೇಕಿದೆ ಎಂದು ಕುಮಾರ ಹೇಳಿದರು.
ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದ ಶಾ ಗುರುವಾರ ಬೆಳಿಗ್ಗೆ ಇಲ್ಲಿಗೆ ಆಗಮಿಸಿದ್ದು, ನೇರವಾಗಿ ಪರೀಕ್ಷಾ ತಾಣಕ್ಕೆ ತೆರಳಿದ್ದ ಎಂದು ಸಿದ್ಗೋರಾ ಠಾಣಾಧಿಕಾರಿ ತಿಳಿಸಿದರು.