ಮಹಿಳೆಯ ಅತ್ಯಾಚಾರ ಪ್ರಕರಣ: ಪಾದ್ರಿಯ ಬಂಧನ
ತಿರುವನಂತಪುರಂ, ಜು.12: ಮಹಿಳೆಯೊಬ್ಬರನ್ನು ಹಲವು ವರ್ಷಗಳ ಕಾಲ ಅತ್ಯಾಚಾರವೆಸಗಿದ ಆರೋಪದಲ್ಲಿ ನಾಲ್ಕು ಪಾದ್ರಿಗಳಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ ನಂತರ ಪೊಲೀಸರು ನಾಲ್ಕು ಆರೋಪಿಗಳ ಪೈಕಿ ಓರ್ವ ಪಾದ್ರಿಯನ್ನು ಬಂಧಿಸಿದ್ದಾರೆ. ಪ್ರಕರಣದ ಆರೋಪಿ ಫಾದರ್ ಜಾಬ್ ಮ್ಯಾಥ್ಯೂವನ್ನು ಕೊಲ್ಲಂನಲ್ಲಿ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಆರೋಪಿಗಳು ಪೊಲೀಸರಿಗೆ ಶರಣಾಗುವಂತೆ ಮಲಂಕರ ಆರ್ಥೊಡಾಕ್ಸ್ ಚರ್ಚ್ ಸೂಚಿಸಿದೆ. ನ್ಯಾಯಾಲಯದ ಆದೇಶದಂತೆ ಇತರ ಮೂವರು ಆರೋಪಿಗಳು ಶೀಘ್ರದಲ್ಲಿ ಶರಣಾಗುವುದಾಗಿ ಚರ್ಚ್ ಪರ ವಕ್ತಾರರು ತಿಳಿಸಿದ್ದಾರೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಲಂಕರ ಸಿರಿಯನ್ ಆರ್ಥೊಡಾಕ್ಸ್ ಚರ್ಚ್‌ಗೆ ಸೇರಿದ ನಾಲ್ವರು ಪಾದರಿಗಳ ವಿರುದ್ಧ ಕೇರಳ ಪೊಲೀಸ್‌ನ ಕ್ರೈಬ್ರಾಂಚ್ ವಿಭಾಗ ಪ್ರಕರಣ ದಾಖಲಿಸಿದ ಕೂಡಲೇ ಆರೋಪಿಗಳಾದ ಅಬ್ರಹಾಂ ವರ್ಗೀಸ್ ಅಲಿಯಾಸ್ ಸೋನಿ, ಜಾಬ್ ಮ್ಯಾಥ್ಯೂ ಮತ್ತು ಜೈಸ್ ಕೆ.ಜಾರ್ಜ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಪಾದ್ರಿಗಳು ಬೇಟೆಗಾರರಂತೆ ವರ್ತಿಸಿದ್ದಾರೆ ಎಂದು ತಿಳಿಸಿತ್ತು.
ಎರಡು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ, “ನಾನು ಅಪ್ರಾಪ್ತೆಯಾಗಿರುವಾಗಲೇ ನನ್ನ ದೂರದ ಸಂಬಂಧಿ ಫಾದರ್ ವರ್ಗೀಸ್ ನಾನು ನನ್ನನ್ನು ಅತ್ಯಾಚಾರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಆಕೆ ಇನ್ನೊರ್ವ ಪಾದ್ರಿ ಜಾಬ್ ಮ್ಯಾಥ್ಯೂ ಬಳಿ ತಪ್ಪೊಪ್ಪಿಗೆ ಕೋಣೆಯಲ್ಲಿ ತಿಳಿಸಿದಾಗ ಅವರು ಕೂಡಾ ಈ ವಿಷಯವನ್ನು ಬಳಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡರು. ನಂತರ ಆ ಪಾದ್ರಿ ಇತರ ಇಬ್ಬರು ಪಾದ್ರಿಗಳಾದ ಜೈಸ್ ಕೆ. ಜಾರ್ಜ್ ಹಾಗೂ ಜಾನ್ಸನ್ ವಿ ಮ್ಯಾಥ್ಯೂ ಕೂಡಾ ಇದೇ ವಿಷಯವನ್ನು ಬಳಸಿ ಆಕೆಯ ಅತ್ಯಾಚಾರವೆಸಗುವಂತೆ ಪ್ರೇರಣೆ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.