ಆಟಗಾರರೊಂದಿಗೆ ಸಂಭ್ರಮಿಸಿದ ಕ್ರೊಯೇಶಿಯ ಅಧ್ಯಕ್ಷೆ ಕೊಲಿಂಡಾ
Update: 2018-07-12 23:53 IST
ಮಾಸ್ಕೊ, ಜು.12: ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್‌ನ ಎರಡನೇ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿರುವ ಕ್ರೊಯೇಶಿಯ ತಂಡದ ಆಟಗಾರರು ತಮ್ಮ ದೇಶದ ಅಧ್ಯಕ್ಷೆಯೊಂದಿಗೆ ವಿಜಯೋತ್ಸವ ಆಚರಿಸಿಕೊಂಡರು.
ಕ್ರೊಯೇಶಿಯ ಅಧ್ಯಕ್ಷೆ ಕೊಲಿಂಡಾ ಗ್ರಾಬರ್-ಕಿಟರೊವಿಕ್ ಕಳೆದ ವಾರ ವಿಶ್ವಕಪ್ ಪಂದ್ಯ ವೀಕ್ಷಿಸಲು ಇತರ ಫುಟ್ಬಾಲ್ ಅಭಿಮಾನಿಗಳೊಂದಿಗೆ ವಿಮಾನದ ಇಕಾನಮಿ ಕ್ಲಾಸ್‌ನಲ್ಲಿ ರಶ್ಯಕ್ಕೆ ಆಗಮಿಸಿದ್ದರು. 2015ರಲ್ಲಿ ಕ್ರೊಯೇಶಿಯಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕೊಲಿಂಡಾ ಖುದ್ದು ವಿಶ್ವಕಪ್‌ನಲ್ಲಿ ಉಪಸ್ಥಿತರಿದ್ದು ಆಟಗಾರರನ್ನು ಹುರಿದುಂಬಿಸಿದರು. ಅವರ ಈ ನಡೆಯು ಎಲ್ಲರ ಹೃದಯ ಗೆದ್ದಿದೆ.
ಕಳೆದ ವಾರ ಕ್ರೊಯೇಶಿಯ ತಂಡ ರಶ್ಯ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದುಕೊಂಡು ಸೆಮಿ ಫೈನಲ್‌ಗೆ ತಲುಪಿತ್ತು. ಆಗ ಆಟಗಾರರ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ್ದ ಕೊಲಿಂಡಾ ಆಟಗಾರರೊಂದಿಗೆ ಸಂಭ್ರಮ ಹಂಚಿಕೊಂಡಿದ್ದರು.