ಸಾಧಕರನ್ನು ಜಾತಿಗೆ ಸೀಮಿತಗೊಳಿಸುವವರು...

Update: 2018-07-19 18:46 GMT

ಮಾನ್ಯರೇ,

ಫಿನ್ಲೆಂಡಿನಲ್ಲಿ ಇತ್ತೀಚೆಗೆ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಮಹಿಳಾ ವಿಭಾಗದ 400 ಮೀಟರ್ ಓಟದ ಸ್ಫರ್ಧೆಯಲ್ಲಿ ಭಾರತದ ಅಸ್ಸಾಂ ಮೂಲದ ಹಿಮಾದಾಸ್‌ರವರು 51.46 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಸಂತಸ ಸಂಭ್ರಮ ಮೂಡಿಸಿ ಭಾರತದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಿದ್ದಾರೆ. ಹಿಮಾದಾಸ್‌ರ ಈ ಶ್ರೇಷ್ಠ ಸಾಧನೆಗೆ ದೇಶದ ಗಣ್ಯರೆಲ್ಲ ಶುಭ ಹಾರೈಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಡು ಬಡತನದ ಕುಟುಂಬದಲ್ಲಿ ಜನಿಸಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಇವರ ಕ್ರೀಡಾ ಸಾಧನೆ ನಿಜಕ್ಕೂ ಶ್ಲಾಘನೀಯ. ಆದರೆ ಈ ಸಂಭ್ರಮವನ್ನು ಖುಷಿ ಪಡುವುದನ್ನು ಬಿಟ್ಟು ಅಸ್ಸಾಂ, ಕರ್ನಾಟಕ, ಪಶ್ಚಿಮ ಬಂಗಾಳ, ಹರ್ಯಾಣ, ಕೇರಳ ಸೇರಿದಂತೆ ಭಾರತದ ಹಲವು ರಾಜ್ಯಗಳ ಹಲವು ಮಂದಿ ಹಿಮಾದಾಸ್‌ರ ಜಾತಿಯ ಬಗ್ಗೆ ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ್ದಾರೆಂಬ ಮಾಹಿತಿ ಬಂದಿದೆ. ಇದು ದೇಶದ ಕ್ರೀಡಾಭಿಮಾನಿಗಳಿಗೆ ತುಂಬಾ ನೋವುಂಟು ಮಾಡುವ ಸಂಗತಿ. ಕೆಲವು ಜಾತಿವಾದಿಗಳು ಹಿಮಾದಾಸ್‌ರವರು ಕಡು ಬಡತನದಲ್ಲಿ ಬೆಳೆದು ಬಂದ ದಾರಿಯನ್ನು ತಿಳಿದುಕೊಳ್ಳುವುದನ್ನು ಬಿಟ್ಟು ಅವರ ಜಾತಿ ಬಗ್ಗೆ ತಲೆ ಕೆಡಿಸಿಕೊಂಡಿರುವುದು ದೇಶದ ದುರ್ದೈವ. ಜಾತ್ಯತೀತವಾಗಿರುವ ನಮ್ಮ ಭಾರತ ದೇಶದಲ್ಲಿ ಇತ್ತೀಚೆಗೆ ಕೆಲವು ಜಾತಿವಾದಿ ನಾಯಕರಿಂದಾಗಿ ಜಾತಿ ವ್ಯವಸ್ಥೆ ಮತ್ತೆ ಹುಟ್ಟಿಕೊಳ್ಳುತ್ತಿದೆ, ಜಾತಿ ಅಸಮಾನತೆ, ಲಿಂಗ, ಪಂಥ ಭೇದದ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನು,್ನ ಶರಣ ಸಂತರನ್ನು ಆಯಾ ಜಾತಿ ಧರ್ಮಗಳಿಗೆ ಸೀಮಿತಗೊಳಿಸಿ ಅವಮಾನಿಸಲಾಗುತ್ತಿದೆ.
ರಾಜಕೀಯ ನಾಯಕರ, ಚಲನಚಿತ್ರ ನಟ-ನಟಿಯರ, ಸಾಹಿತಿಗಳ, ಕ್ರೀಡಾ ಪಟುಗಳಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಶ್ರೇಷ್ಠ ವ್ಯಕ್ತಿಗಳ ಜಾತಿಗಳನ್ನು ಹುಡುಕುತ್ತ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಭಾರತದಲ್ಲಿರುವ ಅನಿಷ್ಟ ಜಾತಿ ವ್ಯವಸ್ಥೆಯನ್ನು ಇಡೀ ಜಗತ್ತಿಗೆ ತೋರಿಸುತ್ತಿರುವವರ ಬಗ್ಗೆ ಮರುಕಪಡಬೇಕಾಗಿದೆ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News