ಪಾಕಿಸ್ತಾನದ ಫಖರ್ ಝಮಾನ್ ನೂತನ ವಿಶ್ವ ದಾಖಲೆ

Update: 2018-07-22 12:04 GMT

 ಹರಾರೆ, ಜು.22: ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಪಾಕ್‌ನ ಎಡಗೈ ದಾಂಡಿಗ ಫಖರ್ ಝಮಾನ್ ನೂತನ ವಿಶ್ವ ದಾಖಲೆ ನಿರ್ಮಿಸಿದರು. ರವಿವಾರ ಝಿಂಬಾಬ್ವೆ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದ ವೇಳೆ ಪಾಕ್‌ನ ಆರಂಭಿಕ ಆಟಗಾರ ಝಮಾನ್ ಈ ಸಾಧನೆ ಮಾಡಿದ್ದಾರೆ.

 ಝಮಾನ್ ಕೇವಲ 18 ಇನಿಂಗ್ಸ್‌ಗಳಲ್ಲಿ ಸಾವಿರ ರನ್ ಪೂರೈಸಿದರು. ಈ ಮೂಲಕ ತಲಾ 21 ಇನಿಂಗ್ಸ್‌ನಲ್ಲಿ ಸಾವಿರ ರನ್ ಪೂರೈಸಿದ್ದ ವಿಂಡೀಸ್‌ನ ದಿಗ್ಗಜ ಆಟಗಾರ ರಿಚರ್ಡ್ಸ್, ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್, ಜೊನಾಥನ್ ಟ್ರಾಟ್, ದ.ಆಫ್ರಿಕದ ಕ್ವಿಂಟನ್ ಡಿಕಾಕ್ ಹಾಗೂ ಸಹ ಆಟಗಾರ ಬಾಬರ್ ಆಝಂ ದಾಖಲೆಯನ್ನು ಮುರಿದು ಮುನ್ನುಗ್ಗಿದರು.

ರಿಚರ್ಡ್ಸ್ 1980ರಲ್ಲಿ ಅತ್ಯಂತ ವೇಗವಾಗಿ ಸಾವಿರ ರನ್ ಪೂರೈಸಿದ ಮೊದಲ ದಾಂಡಿಗನೆಂಬ ಸಾಧನೆ ಮಾಡಿದ್ದರು.

ಭಾರತದ ‘ರನ್ ಮೆಶಿನ್’ ಖ್ಯಾತಿಯ ವಿರಾಟ್ ಕೊಹ್ಲಿ 24 ಇನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡಿದ್ದರು.

ಝಿಂಬಾಬ್ವೆ ವಿರುದ್ಧ ಸರಣಿಯ ಮೊದಲ 4 ಪಂದ್ಯಗಳಲ್ಲಿ ಒಟ್ಟು 430 ರನ್ ಗಳಿಸಿದ್ದ ಝಮಾನ್‌ಗೆ ಬ್ಯಾಟಿಂಗ್‌ನಲ್ಲಿ ನೂತನ ದಾಖಲೆ ನಿರ್ಮಿಸಲು ಇಂದು ಕೇವಲ 20 ರನ್ ಅಗತ್ಯವಿತ್ತು. ಝಮಾನ್ ಶುಕ್ರವಾರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಪಾಕ್‌ನ ಮೊದಲ ದಾಂಡಿಗ ಎನಿಸಿಕೊಂಡಿದ್ದರು. ಇಮಾಮ್‌ವುಲ್ ಹಕ್‌ರೊಂದಿಗೆ ಮೊದಲ ವಿಕೆಟ್‌ಗೆ 304 ರನ್ ಜೊತೆಯಾಟ ನಡೆಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News