×
Ad

ವಿಜಯ ಮಲ್ಯ ಭಾರತಕ್ಕೆ ಹಿಂದಿರುಗಲಿದ್ದಾರೆಯೇ ?

Update: 2018-07-24 23:50 IST

ಲಂಡನ್, ಜು. 25: ಭಾರತದಲ್ಲಿ ವಿವಿಧ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿಗೂ ಅಧಿಕ ಮೊತ್ತ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ, ತಾನು ದೇಶಕ್ಕೆ ಮರಳಿ ಕಾನೂನು ಎದುರಿಸಲು ಬಯಸಿದ್ದೇನೆ ಎಂಬ ಸಂದೇಶವನ್ನು ಭಾರತೀಯ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

ದೇಶ ಮತ್ತು ವಿದೇಶಗಳಲ್ಲಿ ಮಲ್ಯ ಹೊಂದಿರುವ ಎಲ್ಲ ಸೊತ್ತುಗಳನ್ನು ತಕ್ಷಣ ಮುಟ್ಟುಗೋಲು ಹಾಕಲು ಸರಕಾರಕ್ಕೆ ಅಧಿಕಾರ ನೀಡುವ ಅಧ್ಯಾದೇಶವೊಂದು ಇತ್ತೀಚೆಗೆ ಜಾರಿಗೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟನ್ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಭಾರತ ಸರಕಾರವು ಲಂಡನ್ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿರುವುದನ್ನು ಸ್ಮರಿಸಬಹುದಾಗಿದೆ.

ತಾನು ಭಾರತದಲ್ಲಿ ಕಾನೂನು ಪ್ರಕ್ರಿಯೆಯನ್ನು ಎದುರಿಸುತ್ತೇನೆ ಹಾಗೂ ‘ದೇಶಭ್ರಷ್ಟ ಆರ್ಥಿಕ ಅಪರಾಧ ಅಧ್ಯಾದೇಶ’ದಡಿಯಲ್ಲಿ ತನ್ನ ವಿರುದ್ಧ ತೆಗೆದುಕೊಂಡಿರುವ ಕ್ರಮವನ್ನು ಪ್ರಶ್ನಿಸಬಯಸುತ್ತೇನೆ ಎಂಬ ಸಂದೇಶವನ್ನು ಮಲ್ಯ ಇತ್ತೀಚೆಗೆ ಅಧಿಕಾರಿಗಳಿಗೆ ಕಳುಹಿಸಿದ್ದಾನೆ ಎಂದು ಹೇಳಲಾಗಿದೆ.

ಆದಾಗ್ಯೂ, ಈ ಬೆಳವಣಿಗೆಯು ಇನ್ನೂ ಅಂತಿಮ ಹಂತವನ್ನು ತಲುಪಿಲ್ಲ ಎಂದು ತನಿಖಾ ಸಂಸ್ಥೆಗಳ ಉನ್ನತ ಮೂಲಗಳು ತಿಳಿಸಿವೆ.

9,000 ಕೋಟಿ ರೂ.ಗೂ ಅಧಿಕ ಬ್ಯಾಂಕ್ ವಂಚನೆಗೆ ಸಂಬಂಧಿಸಿ ‘ದೇಶಭ್ರಷ್ಟ ಆರ್ಥಿಕ ಅಪರಾಧ ಅಧ್ಯಾದೇಶ’ದ ಅಡಿಯಲ್ಲಿ ಮಲ್ಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಅನುಷ್ಠಾನ ನಿರ್ದೇಶನಾಲಯದ ಮನವಿಗೆ ಸಂಬಂಧಿಸಿ, ತನ್ನೆದುರು ಆಗಸ್ಟ್ 27ರಂದು ಹಾಜರಾಗುವಂತೆ ಮುಂಬೈಯ ವಿಶೇಷ ಕಪ್ಪು ಹಣ ಬಿಳುಪು ನಿಷೇಧ ನ್ಯಾಯಾಲಯವು ಮಲ್ಯರಿಗೆ ಕಳೆದ ತಿಂಗಳು ಸಮನ್ಸ್‌ಗಳನ್ನು ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News