×
Ad

ಈ ವರ್ಷದ ಕೊನೆಯಲ್ಲಿ ಇವಿಎಂ, ವಿವಿಪ್ಯಾಟ್‌ಗಳ ಖರೀದಿ: ಚು. ಆಯೋಗ

Update: 2018-07-25 23:33 IST

ಹೊಸದಿಲ್ಲಿ, ಜು.25: 2019ರ ಲೋಕಸಭಾ ಚುನಾವಣೆಗೆ ಅಗತ್ಯವಿರುವ ಸುಮಾರು 23.25 ಲಕ್ಷ ಇವಿಎಂಗಳು ಹಾಗೂ 16.15 ಲಕ್ಷ ವಿವಿಪ್ಯಾಟ್‌ಗಳನ್ನು ಈ ವರ್ಷದ ಕೊನೆಯಲ್ಲಿ ಒದಗಿಸಲಾಗುವುದು ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ.

 ತಾನು ನೇಮಿಸಿರುವ ತಂತ್ರಜ್ಞರ ಸಮಿತಿಯು ವಿವಿಪ್ಯಾಟ್‌ಗಳ ತಾಂತ್ರಿಕ ಸ್ಥಿರತೆಯನ್ನು ಪರಿಶೀಲಿಸುತ್ತಿರುವ ಕಾರಣ ಈ ಯಂತ್ರಗಳನ್ನು ಒದಗಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಆಯೋಗ ತಿಳಿಸಿದೆ. 13.95 ಲಕ್ಷ ಮತಹಾಕುವ ವಿಭಾಗ ಮತ್ತು 9.3 ಲಕ್ಷ ನಿಯಂತ್ರಣ ವಿಭಾಗಗಳುಳ್ಳ ಇವಿಎಂ ಯಂತ್ರಗಳನ್ನು ಸೆಪ್ಟಂಬರ್ 30ರ ಒಳಗಾಗಿ ಒದಗಿಸಲಾಗುವುದು. ಆದರೆ ವಿವಿಪ್ಯಾಟ್‌ಗಳನ್ನು ನವೆಂಬರ್ ಅಂತ್ಯದ ವೇಳೆಗೆ ನೀಡಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ. 16.15 ಲಕ್ಷ ವಿವಿಪ್ಯಾಟ್ ಯಂತ್ರಗಳಿಗೆ ಚುನಾವಣಾ ಆಯೋಗ ಬೇಡಿಕೆಯಿಟ್ಟಿದ್ದರೂ ಆರ್ಡರ್ ಪಡೆದ ಹದಿನಾಲ್ಕು ತಿಂಗಳ ನಂತರವೂ ಬಿಇಎಲ್ ಮತ್ತು ಇಸಿಐಎಲ್ ಕೇವಲ 3.48 ಲಕ್ಷ ಯಂತ್ರಗಳನ್ನು ಪೂರೈಸಿದೆ ಎಂದು ಮಾಹಿತಿ ಹಕ್ಕಿನಡಿ ಪಡೆದ ಉತ್ತರಕ್ಕೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗ ಈ ವಿವರಣೆ ನೀಡಿದೆ.

2019 ಲೋಕಸಭಾ ಚುನಾವಣೆ ಅವಧಿಗೂ ಮುನ್ನ ನಡೆದರೆ ಎಲ್ಲ ಮತಕೇಂದ್ರಗಳಿಗೆ ಬೇಕಾಗುವಷ್ಟು ಮತ ಯಂತ್ರಗಳು ಚುನಾವಣಾ ಆಯೋಗದ ಬಳಿಯಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News