ಡಿಡಿಸಿಎ ಕ್ರಿಕೆಟ್ ಸಮಿತಿಗೆ ಸೆಹ್ವಾಗ್ ನೇಮಕ
ಹೊಸದಿಲ್ಲಿ, ಜು.25: ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ರಾಜ್ಯದ ಐಕಾನ್ ಆಟಗಾರ ವೀರೇಂದ್ರ ಸೆಹ್ವಾಗ್‌ರನ್ನು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ(ಡಿಡಿಸಿಎ)ತ್ರಿಸದಸ್ಯ ಕ್ರಿಕೆಟ್ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಹೇಳಿದ್ದಾರೆ.
ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯಲ್ಲಿ ಮಾಜಿ ಟೆಸ್ಟ್ ಆಟಗಾರರಾದ ಆಕಾಶ್ ಚೋಪ್ರಾ ಹಾಗೂ ರಾಹುಲ್ ಸಂಘ್ವಿ ಇತರ ಇಬ್ಬರು ಸದಸ್ಯರಾಗಿದ್ದಾರೆ.
ಲೋಧಾ ಸಮಿತಿ ಮಾಡಿರುವ ಶಿಫಾರಸು ಹಾಗೂ ಬಿಸಿಸಿಐ ರಾಜ್ಯ ಸಂಸ್ಥೆಗೆ ನೀಡಿರುವ ಮಾರ್ಗದರ್ಶನದ ಪ್ರಕಾರ ವಿವಿಧ ಆಯ್ಕೆ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಭಾರತದ ಆರಂಭಿಕ ಆಟಗಾರ ಗೌತಮ್ ಗಂಭೀರ್ ಸಮಿತಿಯ ‘ವಿಶೇಷ ಆಹ್ವಾನಿತ’ರಾಗಿರುತ್ತಾರೆ ಎಂದು ಪತ್ರಿಕಾಪ್ರಕಟನೆಯಲ್ಲಿ ಡಿಡಿಸಿಎ ಅಧ್ಯಕ್ಷರು ಉಲ್ಲೇಖಿಸಿದ್ದಾರೆ. ಈಗಲೂ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಗಂಭೀರ್ ಪಾತ್ರವೇನು ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ.
‘‘ಗಂಭೀರ್ ಆಯ್ಕೆ ವಿಷಯದಲ್ಲಿ ನಿಶ್ಚಿತವಾಗಿ ತನ್ನ ಕರ್ತವ್ಯ ನಿಭಾಯಿಸಲಿದ್ದಾರೆ. ನಾವು ಲೋಧಾ ಸಮಿತಿಯ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಕಾರಣ ಸ್ವಹಿತಾಸಕ್ತಿ ಸಂಘರ್ಷ ಎದುರಾಗುವುದಿಲ್ಲ. ನಾವು ಕ್ರಿಕೆಟ್ ಸಮಿತಿಗೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇವೆ’’ ಎಂದು ಡಿಡಿಸಿಎ ಕಾರ್ಯದರ್ಶಿ ವಿನೋದ್ ತಿಹಾರ ಹೇಳಿದ್ದಾರೆ.