ಎನ್‌ಜಿಟಿ ಅಧ್ಯಕ್ಷರಾಗಿ ನ್ಯಾ.ಗೋಯೆಲ್ ನೇಮಕ ವಿವಾದ: ರಾಮವಿಲಾಸ ಪಾಸ್ವಾನ್,ಪುತ್ರನಿಂದ ಅಂತಿಮ ಎಚ್ಚರಿಕೆ

Update: 2018-07-27 13:42 GMT

ಹೊಸದಿಲ್ಲಿ,ಜು.27: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದ ಅಧ್ಯಕ್ಷರಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎ.ಕೆ.ಗೋಯೆಲ್ ಅವರ ನೇಮಕವನ್ನು ಆ.9ರೊಳಗೆ ರದ್ದುಗೊಳಿಸದಿದ್ದರೆ ತಮ್ಮ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)ವು ದಲಿತ ಸಂಘಟನೆಗಳು ಮುಂದಿನ ತಿಂಗಳು ನಡೆಸಲಿರುವ ಸರಕಾರ ವಿರೋಧಿ ಪ್ರತಿಭಟನೆಯನ್ನು ಸೇರಿಕೊಳ್ಳಲಿದೆ ಎಂದು ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಮತ್ತು ಅವರ ಪುತ್ರ ಚಿರಾಗ್ ಪಾಸ್ವಾನ್ ಶುಕ್ರವಾರ ಬೆದರಿಕೆಯೊಡ್ಡುವುದರೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಹೊಸ ಸಂಕಷ್ಟಕ್ಕೆ ಸಿಲುಕಿದೆ.

ನ್ಯಾ.ಗೋಯೆಲ್ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ದಲಿತ ಗುಂಪುಗಳು ಆರೋಪಿಸಿರುವ ಸರ್ವೋಚ್ಚ ನ್ಯಾಯಾಲಯದ ಪೀಠದ ಸದಸ್ಯರಾಗಿದ್ದರು.

ಎನ್‌ಡಿಎಗೆ ನಮ್ಮ ಬೆಂಬಲವು ವಿಷಯಾಧಾರಿತವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಚಿರಾಗ್,ಟಿಡಿಪಿಯಂತೆ ಎಲ್‌ಜೆಪಿಯು ಎನ್‌ಡಿಎ ಮೈತ್ರಿಕೂಟವನ್ನು ತೊರೆಯುವುದಿಲ್ಲ. ಸರಕಾರದ ಭಾಗವಾಗಿದ್ದುಕೊಂಡೇ ನಾವು ದಲಿತರ ಹಕ್ಕುಗಳಿಗಾಗಿ ಹೋರಾಡುತ್ತೇವೆ. ನಮ್ಮ ಸಹನೆಯು ಕ್ಷೀಣಿಸುತ್ತಿದೆ,ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂದು ಆಶಿಸಿದ್ದೇವೆ ಎಂದರು.

ರಾಮ ವಿಲಾಸ ಪಾಸ್ವಾನ್ ಮತ್ತು ಚಿರಾಗ್ ಅವರು ಎನ್‌ಜಿಟಿಯ ಅಧ್ಯಕ್ಷ ಹುದ್ದೆಯಿಂದ ನ್ಯಾ.ಗೋಯೆಲ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ಮೋದಿಯವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದರು. ಎಸ್‌ಸಿ/ಎಸ್‌ಟಿ ಕಾಯ್ದೆಯಿಂದ ಕೈಬಿಡಲಾಗಿರುವ ನಿಬಂಧನೆಗಳನ್ನು ಮರುಸೇರಿಸಲು ಸಂಸತ್‌ನಲ್ಲಿ ಮಸೂದೆಯನ್ನು ತರುವಂತೆ ಮತ್ತು ಈ ಹಂತದಲ್ಲಿ ಅದು ಸಾಧ್ಯವಿಲ್ಲದಿದ್ದರೆ ಕಾರ್ಯಕಾರಿ ಆದೇಶ ಅಥವಾ ಅಧ್ಯಾದೇಶದ ಮೂಲಕ ಆ ಕಾರ್ಯವನ್ನು ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ದಲಿತ ಸಂಘಟನೆಗಳು ಎ.2ರಂದು ಕರೆ ನೀಡಿದ್ದ ಭಾರತ ಬಂದ್ ಸಂದರ್ಭದಲ್ಲಿ ಐದು ರಾಜ್ಯಗಳಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಸುಮಾರು ಒಂದು ಡಝನ್ ಜನರು ಮೃತಪಟ್ಟಿದ್ದರು.

ಬಿಜೆಪಿಯ ವಿರುದ್ಧ ದಲಿತರ ಸಿಟ್ಟು ಶೇ.16ರಷ್ಟು ದಲಿತ ಮತದಾರರನ್ನು ಹೊಂದಿರುವ ಬಿಹಾರದಂತಹ ರಾಜ್ಯಗಳಲ್ಲಿ 2019ರ ಚುನಾವಣೆಗಳಿಗೆ ಮುನ್ನ ಅದರ ಮಿತ್ರಪಕ್ಷಗಳನ್ನು ಅಧೀರಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News