ಭಾರತವನ್ನು ರಕ್ಷಣಾ ಉತ್ಪಾದನೆಯ ಕೇಂದ್ರ ಮಾಡುವ ಉದ್ದೇಶ: ಕೇಂದ್ರದಿಂದ ಮುಂದಿನ ತಿಂಗಳ ಪ್ರಮುಖ ನೀತಿಯ ಅನಾವರಣ
ಹೊಸದಿಲ್ಲಿ, ಜು. 29: ಸದೃಢ ರಕ್ಷಣಾ ಉತ್ಪಾದನೆ ಕಾರ್ಖಾನೆ ನಿರ್ಮಿಸಲು; ಸೇನಾ ಸಲಕರಣೆಗಳನ್ನು ಉತ್ಪಾದಿಸುವ ಐದು ಅತ್ಯುನ್ನತ ಉತ್ಪಾದಕರಲ್ಲಿ ಭಾರತ ಸ್ಥಾನ ಪಡೆಯಲು ಹಾಗೂ ಮುಂದಿನ 10 ವರ್ಷಗಳಲ್ಲಿ ವೇದಿಕೆಯಾಗಲು ಮಾರ್ಗದರ್ಶಿ ಸೂತ್ರ ರೂಪಿಸಲು ಸರಕಾರ ಮುಂದಿನ ತಿಂಗಳು ಪ್ರಮುಖ ನೀತಿಯೊಂದನ್ನು ಅನಾವರಣಗೊಳಿಸುವ ಸಾಧ್ಯತೆ ಇದೆ. ಅನುಮೋದನೆಗೆ ಕೇಂದ್ರ ಸಂಪುಟಕ್ಕೆ ಕಳುಹಿಸುವ ಮೊದಲು ಈ ನೀತಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುದ್ಧ ವಿಮಾನಗಳು, ದಾಳಿ ಹೆಲಿಕಾಪ್ಟರ್‌ಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಅತ್ಯಾಧುನಿಕ ಸಲಕರಣೆಗಳನ್ನು ದೇಶೀಯವಾಗಿ ಉತ್ಪಾದಿಸಲು ಸಂಕೀರ್ಣ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಸಂಪನ್ಮೂಲಗಳನ್ನು ಹೂಡಿಕೆ ಮಾಡುವಲ್ಲಿ ಈ ರಕ್ಷಣಾ ಉತ್ಪಾದನಾ ನೀತಿ (ಡಿಪಿಪಿ-2018) ಪ್ರಾಮುಖ್ಯತೆ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಕರಡು ನೀತಿಯ ಪ್ರಕಾರ 2025ರ ಒಳಗೆ ಸೇನಾ ಸರಕು ಹಾಗೂ ಸೇವೆಯಲ್ಲಿ 1,70,000 ಕೋ. ರೂ. ವಹಿವಾಟು ಸಾಧಿಸುವುದನ್ನು ಸರಕಾರ ಎದುರು ನೋಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಜಗತ್ತಿನಲ್ಲಿ ಅತ್ಯಧಿಕ ಸೇನಾ ಸಲಕರಣೆಗಳನ್ನು ಆಮದು ಮಾಡಿಕೊಂಡ ದೇಶ ಭಾರತ. 2004-2008ಕ್ಕೆ ಹೋಲಿಸಿದರೆ ಕಳೆದ ಏದು ವರ್ಷಗಳಲ್ಲಿ ಭಾರತದ ಪ್ರಮುಖ ಶಶ್ತ್ರಾಸ್ತ್ರಗಳ ಆಮದು ಶೇ. 111ಕ್ಕೆ ಏರಿಕೆಯಾಗಿದೆ. ಕಳೆದ ಆರು ದಶಕಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಎಲ್ಲ ಪ್ರಮುಖ ರಕ್ಷಣಾ ಸಲಕರಣೆಗಳನ್ನು ದೇಶೀಯವಾಗಿ ಉತ್ಪಾದಿಸುವುದು ಡಿಪಿಪಿಯ ಉದ್ದೇಶ ಎಂದು ಅವರು ಹೇಳಿದ್ದಾರೆ.