ದೇಶಾದ್ಯಂತ ಮಳೆ ಕೊರತೆ ಶೇ.5ರಲ್ಲಿ ಸ್ಥಿರ

Update: 2018-07-29 17:48 GMT

ಹೊಸದಿಲ್ಲಿ,ಜು.29: ಕಳೆದೊಂದು ವಾರದಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಕೊರತೆಯ ಪ್ರಮಾಣ ಇಳಿಮುಖಗೊಂಡಿದೆ,ಆದರೆ ದೇಶಾದ್ಯಂತ ಮಳೆ ಕೊರತೆಯ ಪ್ರಮಾಣ ಶೇ.5ರಲ್ಲಿ ಸ್ಥಿರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ತಿಳಿಸಿದೆ.

ಈ ಮಳೆಗಾಲದಲ್ಲಿ ಈವರೆಗೆ ದೇಶದ ಶೇ.74ರಷ್ಟು ಭಾಗದಲ್ಲಿ ಸಾಮಾನ್ಯ ಮಳೆಯಾಗಿದೆ. ದಕ್ಷಿಣ ಭಾರತ ಮತ್ತು ಮಧ್ಯಭಾರತದಲ್ಲಿ ಒಳ್ಳೆಯ ಮಳೆಯಾಗುತ್ತಿದೆ,ಆದರೆ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಳೆಯ ಕೊರತೆ ಕಂಡು ಬಂದಿದ್ದು,ಮೈನಸ್ 29 ಶೇಕಡಾದಷ್ಟಿದೆ.

ಉ.ಪ್ರದೇಶ,ರಾಜಸ್ಥಾನ,ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರ್ಯಾಣ,ದಿಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಮಳೆಯ ಕೊರತೆಯ ಪ್ರಮಾಣ ಮೈನಸ್ ಒಂದು ಶೇಕಡಾದಷ್ಟಿದೆ ಎಂದು ಐಎಂಡಿಯು ತಿಳಿಸಿದೆ.

ಮಳೆಯ ಕೊರತೆಯನ್ನು ಎದುರಿಸುತ್ತಿದ್ದ ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಇನ್ನೊಂದೆಡೆ ಮಧ್ಯ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದರೂ ಮೋಡಗಳ ದಟ್ಟಣೆ ಕ್ಷೀಣಿಸುತ್ತಿರುವುದರಿಂದ ನೆರೆ ಅಪಾಯದ ಸಾಧ್ಯತೆಯು ತಗ್ಗಿದೆ ಎಂದು ಐಎಂಡಿಇಯ ಹೆಚ್ಚುವರಿ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ತಿಳಿಸಿದರು.

ವಾಯುವ್ಯ ಉ.ಪ್ರದೇಶ ಮತ್ತು ನೆರೆಯ ಪ್ರದೇಶದಲ್ಲಿ ನಿಮ್ನ ಒತ್ತಡ ಪ್ರದೇಶವು ದುರ್ಬಲಗೊಂಡಿರುವುದರಿಂದ ವ್ಯಾಪಕ ಮಳೆಯಾಗುತ್ತಿರುವ ಪೂರ್ವ ಹಿಮಾಲಯಗಳು ಮತ್ತು ಹೊಂದಿಕೊಂಡಿರುವ ಬಯಲು ಪ್ರದೇಶಗಳಲ್ಲಿ ಮಳೆಯು ತಗ್ಗಲಿದೆ ಎಂದು ಇಲಾಖೆಯು ತಿಳಿಸಿದೆ.

ಪೂರ್ವ ಉತ್ತರ ಪ್ರದೇಶದಲ್ಲಿ ನಿಮ್ನ ಒತ್ತಡ ಪ್ರದೇಶವು ರೂಪುಗೊಳ್ಳುತ್ತಿದ್ದು,ಅದರ ಪ್ರಭಾವದಿಂದಾಗಿ ಮುಂದಿನ 2-3 ದಿನಗಳಲ್ಲಿ ಪ.ಬಂಗಾಳ,ಪೂರ್ವ ಉ.ಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News