ದೇಗುಲಕ್ಕೆ ಪ್ರವೇಶ ನಿಷೇಧ: ದಲಿತ ಮಹಿಳೆಯರ ಆರೋಪ

Update: 2018-07-29 18:38 GMT

ಅಹ್ಮದಾಬಾದ್, ಜು. 29: ಗುಜರಾತ್‌ನ ಬೋಟಾಡ್ ಜಿಲ್ಲೆಯ ಗ್ರಾಮದಲ್ಲಿರುವ ಶಿವ ದೇವಾಲಯಕ್ಕೆ ತಮಗೆ ಪ್ರವೇಶ ನಿಷೇಧಿಸಲಾಗಿದೆ ಗ್ರಾಮದ ಕೆಲವು ದಲಿತ ಮಹಿಳೆಯರು ಆರೋಪಿಸಿದ್ದಾರೆ. ಆದಾಗ್ಯೂ, ಇಲ್ಲಿಂದ 160 ಕಿ.ಮೀ. ದೂರದಲ್ಲಿರುವ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಈ ದೇವಾಲಯಕ್ಕೆ ಸಾಮಾನ್ಯವಾಗಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

 ಮಂಗಳಕರವಾದುದು ಎಂದು ಶಿವ ಭಕ್ತರು ಪರಿಗಣಿಸಿರುವ ಹಿಂದೂ ತಿಂಗಳು ಶ್ರಾವಣದ ಸಂದರ್ಭದಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಶನಿವಾರ ದಲಿತ ಮಹಿಳೆಯರು ದೇವಾಲಯಕ್ಕೆ ತೆರಳಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ದಲಿತರಾದ ಕಾರಣಕ್ಕೆ, ನಮಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ’’ ಎಂದು ಭಕ್ತರ ಗುಂಪಿನಲ್ಲಿದ್ದ ಮಹಿಳೆಯೋರ್ವರು ತಿಳಿಸಿದ್ದಾರೆ. ಆದಾಗ್ಯೂ, ಜಾತಿಯನ್ನು ಪರಿಗಣಿಸದೆ, ಮಹಿಳೆಯರು ಈ ದೇವಾಲಯದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ರಾಂಪುರ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎನ್. ರಮಣಿ ತಿಳಿಸಿದ್ದಾರೆ. ಮಹಿಳೆಯರು ದೇವಾಲಯದ ಹೊರಗಿನಿಂದ ಪ್ರಾರ್ಥಿಸಬಹುದು. ಆದರೆ, ಒಳಗೆ ಪ್ರವೇಶಿಸುವಂತಿಲ್ಲ. ದೇವಾಲಯದ ಮಂಡಳಿ ಮಹಿಳೆಯರ ಪ್ರವೇಶಕ್ಕೆ ನಿಷೇಧ ವಿಧಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News