ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೇವಲ 4 ಶೇ. ಮನೆಗಳ ನಿರ್ಮಾಣ
ಹೊಸದಿಲ್ಲಿ, ಜು.30: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2018ರ ಸಾಲಿಗೆ ಒಂಭತ್ತು ರಾಜ್ಯಗಳಿಗಾಗಿ ಮಂಜೂರಾಗಿರುವ 20 ಲಕ್ಷಕ್ಕೂ ಅಧಿಕ ಮನೆಗಳ ಪೈಕಿ ಕೇವಲ ಶೇ.4.05ರಷ್ಟು ಮನೆಗಳು ಈವರೆಗೆ ನಿರ್ಮಾಣಗೊಂಡಿವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿಅಂಶಗಳು ಬೆಟ್ಟುಮಾಡಿವೆ.
ಛತ್ತೀಸ್‌ಗಡ, ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ,ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಮಂಜೂರಾಗಿರುವ ಒಟ್ಟು 20,23,884 ಮನೆಗಳ ಪೈಕಿ ಕೇವಲ 82,143 ಮನೆಗಳು ಪೂರ್ಣಗೊಂಡಿವೆ. ಹರ್ಯಾಣ, ಉ.ಪ್ರದೇಶ ಮತ್ತು ಛತ್ತೀಸ್‌ಗಡ ಅತ್ಯಂತ ಕಳಪೆ ಸಾಧನೆ ಪ್ರದರ್ಶಿಸಿವೆ. ಹರ್ಯಾಣಕ್ಕೆ 10 ಮನೆಗಳ ಸಾಧಾರಣ ಗುರಿಯನ್ನು ನೀಡಲಾಗಿತ್ತಾದರೂ ಅದು ಒಂದೇ ಒಂದು ಮನೆಯನ್ನು ನಿರ್ಮಿಸಿಲ್ಲ. ಉತ್ತರ ಪ್ರದೇಶ 89,426 ಮನೆಗಳನ್ನು ನಿರ್ಮಿಸಬೇಕಾಗಿತ್ತಾದರೂ ಅದೂ ಶೂನ್ಯ ಸಾಧನೆಯನ್ನು ಮಾಡಿದೆ. ಛತ್ತೀಸ್‌ಗಡವು ಮಂಜೂರಾಗಿದ್ದ 2,53,549 ಮನೆಗಳ ಪೈಕಿ ಕೇವಲ 146(ಶೇ.0.05) ಮನೆಗಳನ್ನು ನಿರ್ಮಿಸಿ ತೃಪ್ತಿ ಪಟ್ಟುಕೊಂಡಿದೆ.
ಇತರ ರಾಜ್ಯಗಳೂ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಮಧ್ಯಪ್ರದೇಶ ಮತ್ತು ಒಡಿಶಾ ಅನುಕ್ರಮವಾಗಿ ಶೇ.9.7 ಮತ್ತು ಶೇ.9.08 ಮನೆಗಳನ್ನು ನಿರ್ಮಿಸಿದ್ದು,ಇದೇ ಅತ್ಯುತ್ತಮ ಸಾಧನೆಯಾಗಿದೆ.
ಮನೆಗಳ ನಿರ್ಮಾಣ ಕಾಮಗಾರಿಯು ವಿವಿಧ ಕಾರಣಗಳಿಂದ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು, ರಾಜ್ಯ ಸರಕಾರಗಳ ಅಸಹಕಾರ ಮತ್ತು ಉದಾಸೀನ ಧೋರಣೆ ಯೋಜನೆಯು ಹಿಂದೆ ಬಿದ್ದಿರುವುದಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಸಚಿವಾಲಯವು ಯೋಜನೆಯ ಸ್ಥಿತಿಗತಿಯನ್ನು ಶೀಘ್ರವೇ ಪುನರ್‌ಪರಿಶೀಲಿಸಿ ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.
ಮೂಲಸೌಕರ್ಯ ಮತ್ತು ಕಚ್ಚಾವಸ್ತುಗಳ ಅಲಭ್ಯತೆಯಂತಹ ಇತರ ಕಾರಣಗಳಿಂದಲೂ ಯೋಜನೆಯು ನಿಧಾನವಾಗಿದೆ ಎಂದರು. ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಮಾನದಂಡಗಳು ಈಡೇರುವಂತೆ ನೋಡಿಕೊಳ್ಳುವುದು ರಾಜ್ಯಗಳ ಕರ್ತವ್ಯವಾಗಿತ್ತು ಎಂದರು.
ಯೋಜನೆಯ ಕಳಪೆ ನಿರ್ವಹಣೆಗೆ ಸ್ಥಳೀಯ ಅಂಶಗಳು ಪ್ರಮುಖ ಕಾರಣಗಳಾಗಿವೆ ಎನ್ನುವುದು ಗ್ರಾಮೀಣ ಕ್ಷೇತ್ರದಲ್ಲಿಯ ತಜ್ಞರ ಅಭಿಪ್ರಾಯವಾಗಿದೆ.
ಉದಾಹರಣೆಗೆ ಛತ್ತೀಸ್‌ಗಡ,ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಚುನಾವಣೆಗಳು ಸನ್ನಿಹಿತವಾಗಿವೆ. ಮುಂದಿನ ವೌಲ್ಯಮಾಪನದಲ್ಲಿ ಸಂಖ್ಯೆ ಏರುವುದನ್ನು ನಾವು ಕಾಣಲಿದ್ದೇವೆ. ಇದು ಚುನಾವಣೆಗೆ ಮುನ್ನ ಅಭಿವೃದ್ಧಿಯನ್ನು ತೋರಿಸಲು ಎಲ್ಲ ಪಕ್ಷಗಳ ತಂತ್ರವಾಗಿದೆ ಎಂದು ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರೊ.ಎಚ್.ಕೆ.ಸೋಲಂಕಿ ಹೇಳಿದರು.