ತೃತೀಯ ಲಿಂಗಿಗಳಿಗೆ ‘ಇನ್ನೊಂದು’ ಪದ ಬಳಕೆ: ಕ್ಷಮೆ ಕೋರಿದ ಮೇನಕಾ ಗಾಂಧಿ

Update: 2018-07-30 18:07 GMT

ಹೊಸದಿಲ್ಲಿ, ಜು. 30: ಲೋಕಸಭೆಯಲ್ಲಿ ತೃತೀಯ ಲಿಂಗಿಗಳಿಗೆ ‘ಇನ್ನೊಂದು’ ಎಂಬ  ಪದ ಬಳಕೆ ಮಾಡಿರುವುದಕ್ಕೆ ಸೋಮವಾರ ಕ್ಷಮೆ ಕೋರಿರುವ ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ, “ನಾನು ಅವರ ಬಗ್ಗೆ ನಕ್ಕಿದ್ದಲ್ಲ. ನನ್ನ ಅಜ್ಞಾನದ ಬಗ್ಗೆ ನನಗೇ ಮುಜುಗರವಾಗಿ ನಕ್ಕೆ” ಎಂದಿದ್ದಾರೆ.

 ಶಾಲೆಯ ಪಠ್ಯ ಪುಸ್ತಕಗಳಲ್ಲಿ ಮಾನವ ಸಾಗಾಟ ತಡೆಯುವ ಕುರಿತು ಮಾಹಿತಿಯನ್ನು ಒಳಗೊಳಿಸುವ ಕುರಿತು ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ಸಂದರ್ಭ ಮೇನಕಾ ಗಾಂಧಿ, ತೃತೀಯ ಲಿಂಗಿಗಳನ್ನು ‘ಇನ್ನೊಂದು’ ಎಂದು ಕರೆದಿದ್ದರು. ಈ ಪದ ಬಳಕೆ ಕುರಿತಂತೆ ಮೇನಕಾ ಗಾಂಧಿ ತೃತೀಯ ಲಿಂಗಿ ಸಮುದಾಯಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಜನ ಚಳವಳಿ ಹಾಗೂ ತೃತೀಯ ಲಿಂಗಿ ಮಹಳೆಯ ರಾಷ್ಟ್ರೀಯ ಮೈತ್ರಿಯ ಸದಸ್ಯೆಯಾಗಿರುವ ಮೀರಾ ಸಂಘಮಿತ್ರ ಅವರು, ಮೇನಕಾ ಗಾಂಧಿ ಹಾಗೂ ಇತರ ಎಲ್ಲ ಸಂಸದರು ಕೈ ತಟ್ಟುತ್ತಾ ನಕ್ಕಿರುವುದಕ್ಕೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದರು.

ಲೋಕಸಭೆಯಲ್ಲಿ ಮಾನವ ಸಾಗಾಟ ಮಸೂದೆ 2018ರ ಕುರಿತು ಚರ್ಚೆ ನಡೆಸುತ್ತಿರುವಾಗ ‘ಇನ್ನೊಂದು’ ಎಂಬ ಪದ ಬಳಸಿರುವುದಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ. ನಾನು ಅವರ ಬಗ್ಗೆ ನಕ್ಕಿದ್ದಲ್ಲ. ನನ್ನ ಅಜ್ಞಾನದ ಬಗ್ಗೆ ಮುಜುಗರವಾಗಿ ನಕ್ಕೆ. ತೃತೀಯ ಲಿಂಗಿ ಸಮುದಾಯಕ್ಕೆ ಅಧಿಕೃತವಾಗಿ ಯಾವ ಪದ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಅರಿವಿಲ್ಲ ಎಂದು ಮೇನಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News