×
Ad

ಪ್ರಣಯ್, ಸಮೀರ್ ಎರಡನೇ ಸುತ್ತಿಗೆ ತೇರ್ಗಡೆ

Update: 2018-07-30 23:58 IST

ನಾನ್‌ಜಿಂಗ್, ಜು.30: ಇಲ್ಲಿ ಸೋಮವಾರ ಆರಂಭಗೊಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಣಯ್ ಮತ್ತು ಸಮೀರ್ ವರ್ಮಾ ಗೆಲುವು ದಾಖಲಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

  11ನೇ ಶ್ರೇಯಾಂಕದ ಎಚ್.ಎಸ್.ಪ್ರಣಯ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ನ್ಯೂಝಿಲೆಂಡ್‌ನ ಅಭಿನವ್ ಮನೋಟಾ ವಿರುದ್ಧ 21-12, 21-11 ಅಂತರದಲ್ಲಿ ಗೆಲುವು ದಾಖಲಿಸಿ ಎರಡನೇ ಸುತ್ತು ತಲುಪಿದರು.

ಎರಡನೇ ಸುತ್ತಿನಲ್ಲಿ ಪ್ರಣಯ್ ಅವರು ಬ್ರೆಝಿಲ್‌ನಯಗೊರ್ ಕುಹೊರನ್ನು ಎದುರಿಸಲಿರುವರು.

 ಹಾಂಕಾಂಗ್‌ನ ವಾಂಗ್ ಕಿ ವಿಂಗ್ ಮೊದಲ ಎರಡು ಗೇಮ್‌ಗಳಲ್ಲಿ ಆಡಿದ ಬಳಿಕ ಗಾಯಗೊಂಡು ಕಣದಿಂದ ನಿರ್ಗಮಿಸಿದರು. ಇದರಿಂದಾಗಿ ಯಗೊರ್ ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದರು.

 ವಿನ್ಸೆಂಟ್ ಗೆಲುವು ದಾಖಲಿಸಿದ್ದರೆ ಪ್ರಣಯ್‌ಗೆಕಠಿಣ ಸವಾಲು ಎದುರಾಗುವ ಸಾಧ್ಯತೆ ಇತ್ತು. ಇದೀಗ ಪ್ರಣಯ್‌ಗೆ ಎರಡನೇ ಸುತ್ತಿನಲ್ಲಿ ಸುಲಭದ ಸವಾಲು ಎದುರಾಗಲಿದೆ.

 ಸಮೀರ್ ವರ್ಮಾ ಅವರು ಫ್ರಾನ್ಸ್‌ನ ಲೂಕಸ್ ಕೊರ್ವೆ ವಿರುದ್ಧ 21-13, 21-10 ಅಂತರದಲ್ಲಿ ಜಯ ಗಳಿಸಿದರು. ಮುಂದಿನ ಸುತ್ತಿನಲ್ಲಿ ಸಮೀರ್‌ಗೆ ಲಿನ್‌ಡಾನ್ ಸವಾಲು ಎದುರಾಗಲಿದೆ.

 ಐದು ಬಾರಿ ವರ್ಲ್ಡ್ ಚಾಂಪಿಯನ್ ಪ್ರಶಸ್ತಿ ಜಯಿಸಿದ್ದ ಲಿನ್ ಡಾನ್ ಅವರು ಹಾಲೆಂಡ್‌ನ ಮಾರ್ಕ್ ಕಾಲ್‌ಜೊವ್ ವಿರುದ್ಧ 21-14, 21-14 ಅಂತರದಲ್ಲಿ ಜಯ ಗಳಿಸಿದ್ದರು.

  ಸಮೀರ್ ವರ್ಮಾ ಎರಡು ತಿಂಗಳ ಹಿಂದೆ ನಡೆದ ನ್ಯೂಝಿಲೆಂಡ್ ಓಪನ್‌ನಲ್ಲಿ ಲಿನ್ ಡಾನ್ ವಿರುದ್ಧ ಸೋಲು ಅನುಭವಿಸಿದ್ದರು.

 ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸಮೀತ್ ರೆಡ್ಡಿ ಸುಲಭದ ಜಯ ದಾಖಲಿಸಿದ್ದಾರೆ. ಅತ್ರಿ ಮತ್ತು ರೆಡ್ಡಿ ಅವರು ಪುರುಷರ ಡಬಲ್ಸ್‌ನಲ್ಲಿ ಬಲ್ಗೇರಿಯಾದ ಡೇನಿಯೆಲ್ ನಿಕೋಲಾವ್ ಮತ್ತು ಐವಾನ್ ರುಸೆವ್ ವಿರುದ್ಧ 21-13, 21-18 ಅಂತರದಲ್ಲಿ ಜಯ ಸಾಧಿಸಿದರು. ಇವರು ಜಪಾನ್‌ನ ಟಾಕುಟೊ ಇನೋ ಮತ್ತು ಯುಕಿ ಕಾನೆಕೊ ವಿರುದ್ಧ 21-13, 21-18 ಅಂತರದಲ್ಲಿ ಜಯ ಸಾಧಿಸಿದರು.

ಮಿಕ್ಸೆಡ್ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಡೆನ್ಮಾರ್ಕ್‌ನ ನಿಕೊಲಾಸ್ ನೋರ್ ಮತ್ತು ಸಾರಾ ಥಿಗೆಸೆನ್ ವಿರುದ್ಧ 21-9, 22-20 ಅಂತರದಲ್ಲಿ ಜಯಗಳಿಸಿದರು.

 ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಅವರು ಝೆಕ್ ಗಣರಾಜ್ಯದ ಜಾಕೂಬ್ ಬಿಟ್‌ಮನ್ ಮತ್ತು ಅಲ್ಝ್‌ಬೆಟಾ ಬಾಸೊವಾ ವಿರುದ್ಧ 21-17, 21-15 ಅಂತರದಲ್ಲಿ ಜಯ ಸಾಧಿಸಿದರು.

ರಶ್ಯನ್ ಓಪನ್‌ನಲ್ಲಿ ಬೆಳ್ಳಿ ಜಯಿಸಿದ್ದ ರೋಹನ್ ಕಪೂರ್ ಮತ್ತು ಕುಹೋ ಗರ್ಗ್ ಅವರು ಕೆನಡಾದ ಟೊಬಿ ನಿಗ್ ಮತ್ತು ರಚೆಲ್ ಹೊಂಡೆರಿಚ್ ವಿರುದ್ಧ 21-9, 21-6 ಅಂತರದಲ್ಲಿ ಜಯ ಗಳಿಸಿದರು.

ಸೌರಭ್ ಶರ್ಮಾ ಮತ್ತು ಅನುಷ್ಕಾ ಪಾರಿಕ್ ನೈಜೀರಿಯದ ಎನೆಜೋಹ್ ಅಬಾಹ್ ಮತ್ತು ಪೇಸ್ ಒರ್ಜಿ ವಿರುದ್ಧ 21-13, 21-10 ಅಂತರದಲ್ಲಿ ಗೆಲುವು ದಾಖಲಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಸನ್ಯೊಗೀತಾಘೋರ್ಪಡೆ ಮತ್ತು ಪ್ರಜಕ್ತಾ ಸಾವಂತ್ ಮಾತ್ರ ಸೋಲು ಅನುಭವಿಸಿದರು. ಭಾರತದ ಸ್ಟಾರ್ ಆಟಗಾರರಾದ ಕೆ.ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಮಂಗಳವಾರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಭಿಯಾನ ಆರಂಭಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News