ಹಸ್ತಕ್ಷೇಪವಿಲ್ಲದಿದ್ದರೆ ‘ಅಗೋಚರ ಶಕ್ತಿಗಳು’ ಕಾರ್ಯಾಚರಿಸುತ್ತಿವೆಯೇ?

Update: 2018-08-04 15:18 GMT

ಹೊಸದಿಲ್ಲಿ,ಆ.4: “ಲಿಖಿತ ದೂರುಗಳು ಬಂದರೆ ಮಾತ್ರ ಮಾಧ್ಯಮಗಳಲ್ಲಿ ಸರಕಾರದ ಹಸ್ತಕ್ಷೇಪಗಳ ಬಗ್ಗೆ ಎಡಿಟರ್ಸ್ ಗಿಲ್ಡ್ ಕ್ರಮವನ್ನು ಕೈಗೊಳ್ಳುತ್ತದೆ” ಎಂದು ಎಬಿಪಿ ನ್ಯೂಸ್‌ನ ಮಾಜಿ ಪ್ರೈಮ್ ಟೈಮ್ ನಿರೂಪಕ ಪುಣ್ಯ ಪ್ರಸೂನ್ ಬಾಜಪೈ ಅವರು ಶನಿವಾರ ಟ್ವೀಟಿಸಿದ್ದಾರೆ.

ವಾಹಿನಿಯ ನ್ಯೂಸ್ ಮ್ಯಾನೇಜಿಂಗ್ ಎಡಿಟರ್ ಮಿಲಿಂದ್ ಖಂಡೇಕರ್ ಅವರು ಹುದ್ದೆಯನ್ನು ತೊರೆದ ಒಂದು ದಿನದ ಬಳಿಕ,ಆ.2ರಂದು ಬಾಜಪೈ ಅವರೂ ವಾಹಿನಿಗೆ ರಾಜೀನಾಮೆ ನೀಡಿದ್ದರು. ಇದಕ್ಕೆ ಕೆಲವು ವಾರಗಳ ಮುನ್ನ ವರದಿಯೊಂದನ್ನು ಪ್ರಸಾರ ಮಾಡಿದ್ದಕ್ಕಾಗಿ ಎಬಿಪಿ ನ್ಯೂಸ್ ಹಿರಿಯ ಸಚಿವರಿಂದ ಟೀಕೆಗಳಿಗೆ ಗುರಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೊ ಸಂವಾದದಲ್ಲಿ ಕಾಣಿಸಿಕೊಂಡಿದ್ದ ಮಹಿಳೆಗೆ ತನ್ನ ಆದಾಯ ದ್ವಿಗುಣಗೊಂಡಿದೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಮೊದಲೇ ತರಬೇತುಗೊಳಿಸಲಾಗಿತ್ತು ಎಂದು ಆ ವರದಿಯು ಹೇಳಿತ್ತು. ಈ ಇಬ್ಬರು ಪತ್ರಕರ್ತರ ರಾಜೀನಾಮೆಗಳು ಪತ್ರಿಕಾ ಸ್ವಾತಂತ್ರ,ಮಾಧ್ಯಮಗಳ ಮಾಲಿಕರ ಉತ್ತರದಾಯಿತ್ವ ಮತ್ತು ಟೀಕೆಗಳಿಗೆ ಸರಕಾರದ ನಿಲುವಿನ ಕುರಿತು ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿವೆ.

ಶುಕ್ರವಾರ ಸಂಸತ್ತಿನಲ್ಲಿ ಚರ್ಚೆ ಸಂದರ್ಭ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರು ಸರಕಾರವು ಸುದ್ದಿವಾಹಿನಿಯನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ರಾಥೋಡ್ ಹೇಳಿಕೆಯು ವಾಸ್ತವಾಂಶಗಳನ್ನು ಆಧರಿಸಿರಲಿಲ್ಲ ಎಂದು ಬಾಜಪೈ ಹೇಳಿದ್ದಾರೆ.

ಎಡಿಟರ್ಸ್ ಗಿಲ್ಡ್ ಅಧ್ಯಕ್ಷ ಶೇಖರ ಗುಪ್ತಾ ಅವರು,ಮಾಜಿ ಎಬಿಪಿ ಪತ್ರಕರ್ತರಿಂದ ಹೆಚ್ಚಿನ ಸ್ಪಷ್ಟನೆ ದೊರೆಯುವವರೆಗೆ ತಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಗುರುವಾರ ಹೇಳಿದ್ದರು.

ಸಂಸತ್ತಿನಲ್ಲಿ ಮಾಧ್ಯಮಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೇಗೆ ಚರ್ಚಿಸಬೇಕು ಎನ್ನುವುದು ಪ್ರತಿಪಕ್ಷಗಳಿಗೆ ಗೊತ್ತಿಲ್ಲ. ಸಚಿವರ ಹೇಳಿಕೆ ದಾರಿ ತಪ್ಪಿಸುವಂತಿತ್ತು ಮತ್ತು ಅದು ವಾಸ್ತವವನ್ನು ಆಧರಿಸಿರಲಿಲ್ಲ ಎಂದು ಟ್ವೀಟಿಸಿರುವ ಬಾಜಪೈ,ರಾಥೋಡ್ ಹೇಳಿಕೆಯನ್ನು ಪ್ರಸ್ತಾಪಿಸಿ,ಸರಕಾರವು ಹಸ್ತಕ್ಷೇಪ ಮಾಡಿರದಿದ್ದರೆ ಅದೃಶ್ಯ ಶಕ್ತಿಗಳು ಕಾರ್ಯಾಚರಿಸುತ್ತಿವೆಯೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News