ಅಂಗನವಾಡಿಗಳಿಗೂ ಸ್ಮಾರ್ಟ್‌ಫೋನ್ !

Update: 2018-08-04 15:41 GMT

ಹೊಸದಿಲ್ಲಿ, ಆ.4: ಮಕ್ಕಳಲ್ಲಿ ಪೌಷ್ಟಿಕತೆಯ ಮಟ್ಟದ ಮೇಲುಸ್ತುವಾರಿ ವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಎಂಟು ರಾಜ್ಯಗಳಲ್ಲಿನ ಅಂಗನವಾಡಿಗಳಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳನ್ನು ಒದಗಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಳ್ಳುವುದು, ಅಪೌಷ್ಟಿಕತೆ, ರಕ್ತಹೀನತೆ, ಕಡಿಮೆ ತೂಕ ಇತ್ಯಾದಿ ಸಮಸ್ಯೆಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಆರಂಭಿಸಲಾಗಿರುವ ‘ಪೋಷಣ್ ಅಭಿಯಾನ’ದ ಅಂಗವಾಗಿ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳನ್ನು ಒದಗಿಸಲಾಗಿದೆ. ಈ ಟ್ಯಾಬ್ಲೆಟ್ ಹಾಗೂ ಫೋನ್‌ಗಳಿಗೆ ಸಮಗ್ರ ಶಿಶು ಅಭಿವೃದ್ಧಿ ಸೇವೆಯ ಸಾಮಾನ್ಯ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಪ್ರತೀ ಗ್ರಾಮಗಳಿಗೂ ನಿಗದಿಯಾಗಿರುವ ಪೌಷ್ಟಿಕತೆಯ ಸ್ವರೂಪದ ಮಾಹಿತಿಯನ್ನು ಪಡೆಯಬಹುದು.

ಸಮಗ್ರ ಮೂಲಮಟ್ಟದಿಂದ ವಾಸ್ತವಿಕ ವರದಿಯನ್ನು ಪಡೆಯಲು ಈ ವ್ಯವಸ್ಥೆ ನೆರವಾಗುತ್ತದೆ. ಇಂಟರ್‌ನೆಟ್ ವ್ಯವಸ್ಥೆಯೇ ಇಲ್ಲದ ಗ್ರಾಮಗಳಲ್ಲೂ ಈ ಆ್ಯಪ್ ಬಳಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಕೇಶ್ ಶ್ರೀವಾಸ್ತವ ತಿಳಿಸಿದ್ದಾರೆ. ಅಂಗನವಾಡಿಗಳು ಸಂಗ್ರಹಿಸಿದ ಮಾಹಿತಿಗಳನ್ನು ಅಂಗನವಾಡಿ ಮೇಲ್ವಿಚಾರಕರ ಜೊತೆ ಹಂಚಿಕೊಳ್ಳಬೇಕು. ಅವರು ಇದನ್ನು ದತ್ತಾಂಶ ಮೂಲದ ಸರ್ವರ್‌ಗೆ ಫೀಡ್ ಮಾಡುತ್ತಾರೆ. ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದ್ದಾರೆ.

ಪೌಷ್ಟಿಕತೆಯ ಮಟ್ಟದ ನಿಗಾ ವಹಿಸುವ ಮೂಲಕ ಮಗುವು ಅಪೌಷ್ಟಿಕತೆಯಿಂದ ಬಳಲುತ್ತಿದೆಯೇ ಅಥವಾ ಕಡಿಮೆ ತೂಕ ಹೊಂದಿದೆಯೇ ಎಂಬುದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಈ ಆ್ಯಪ್ ಮೂಲಕ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರ ಕುರಿತ ಮಾಹಿತಿ ಪಡೆಯಬಹುದು ಮತ್ತು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಶ್ರೀವಾಸ್ತವ ಹೇಳಿದರು. ಈ ಎಂಟು ರಾಜ್ಯಗಳ ಅಂಗನವಾಡಿಗಳಿಗೆ ಸುಮಾರು 6 ಲಕ್ಷ ಸ್ಮಾರ್ಟ್‌ಫೋನ್‌ಗಳ ಅಗತ್ಯವಿದೆ. ಈಗ 2 ಲಕ್ಷ ಪೂರೈಸಲಾಗುತ್ತಿದೆ. ದೇಶದಾದ್ಯಂತದ ಅಂಗನವಾಡಿಗಳಿಗೆ ಪೂರೈಸಲು 11 ಲಕ್ಷ ಸ್ಮಾರ್ಟ್‌ಫೋನ್‌ಗಳ ಅಗತ್ಯವಿದೆ. 2020ರ ವೇಳೆಗೆ ಹಂತಹಂತವಾಗಿ ಎಲ್ಲಾ 36 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳು, 718 ಜಿಲ್ಲೆಗಳ ಅಂಗನವಾಡಿಗಳಿಗೆ ಸ್ಮಾರ್ಟ್‌ಫೋನ್ ಒದಗಿಸಲಾಗುವುದು . ಇದುವರೆಗೆ 9.2 ಮಿಲಿಯನ್ ಮಕ್ಕಳು, 1.2 ಮಿಲಿಯನ್ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News