ದ.ಆಫ್ರಿಕ ವಿರುದ್ಧ ಸತತ ಸೋಲಿನಿಂದ ಹೊರ ಬಂದ ಸಿಂಹಳೀಯರು

Update: 2018-08-09 17:57 GMT

ಪಲ್ಲೆಕಲೆ, ಆ.9: ಪ್ರಮುಖ ಮೂರು ವಿಕೆಟ್‌ಗಳನ್ನು ಉರುಳಿಸಿದ ಸುರಂಗ ಲಕ್ಮಲ್ ಸಾಹಸದ ನೆರವಿನಿಂದ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕ ವಿರುದ್ಧದ 4ನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಡಿ.ಎಲ್ ನಿಯಮದಡಿ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕ ವಿರುದ್ಧ ಆಡಿದ 12ನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದೆ. ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕ ವಿರುದ್ಧ ಆಡಿರುವ ಕಳೆದ 11 ಏಕದಿನ ಪಂದ್ಯಗಳಲ್ಲಿ ಸೋಲುಂಡಿತ್ತು. 2014ರಲ್ಲಿ ಪಲ್ಲೆಕಲೆ ಸ್ಟೇಡಿಯಂನಲ್ಲಿ ಕೊನೆಯ ಬಾರಿ ದಕ್ಷಿಣ ಆಫ್ರಿಕ ವಿರುದ್ಧ ಜಯ ಸಾಧಿಸಿತ್ತು. ಇದೀಗ ಕೊನೆಗೂ ಸತತ ಸೋಲಿನಿಂದ ಹೊರ ಬಂದಿದೆ. ಇಲ್ಲಿ ಬುಧವಾರ ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ದುಸಾನ್ ಶನಕ 65(34 ಎಸೆತ,4 ಬೌಂಡರಿ, 5 ಸಿಕ್ಸರ್), ಕುಶಾಲ್ ಪೆರೇರ 51(32 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ತಿಸಾರ ಪೆರೇ ಔಟಾಗದೆ 51 ರನ್(45 ಎಸೆತ, 3 ಬೌಂಡರಿ, 2 ಸಿಕ್ಸರ್)ಕೊಡುಗೆಯ ನೆರವಿನಿಂದ 39 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 306 ರನ್ ಗಳಿಸಿತು. ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕ ಗೆಲುವಿಗೆ 21 ಓವರ್‌ಗಳಲ್ಲಿ 191 ರನ್ ಪರಿಷ್ಕೃತ ಗುರಿ ನೀಡಲಾಯಿತು. ಹರಿಣ ಪಡೆ 9 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿ 3 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಲಕ್ಮಲ್ ದಕ್ಷಿಣ ಆಫ್ರಿಕದ ಹಂಗಾಮಿ ನಾಯಕ ಹಾಗೂ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್(23),ವಿಲ್ಲಿಯಂ ಮುಲ್ಡರ್(4) ಹಾಗೂ ಡೇವಿಡ್ ಮಿಲ್ಲರ್(21) ವಿಕೆಟ್ ಕಬಳಿಸಿದರು.

 ಐದು ಪಂದ್ಯಗಳ ಸರಣಿಯ ಮೊದಲ ಮೂರು ಪಂದ್ಯಗಳನ್ನು ಜಯಿಸಿರುವ ದಕ್ಷಿಣ ಆಫ್ರಿಕ ಈಗಾಗಲೇ ಸರಣಿ ವಶಪಡಿಸಿಕೊಂಡಿದೆ. ಭುಜನೋವಿನಿಂದಾಗಿ ಪಂದ್ಯದಿಂದ ಹೊರಗುಳಿದ ನಾಯಕ ಎಫ್‌ಡು ಪ್ಲೆಸಿಸ್ ಬದಲಿಗೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಡಿಕಾಕ್ ನಿರಾಸೆಗೊಳಿಸಿದ್ದಾರೆ.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ ಡಿಕಾಕ್ ಏಕದಿನ ಕ್ರಿಕೆಟ್‌ನಲ್ಲಿ 4,000 ರನ್ ಪೂರೈಸಿದರು. ಹಾಶಿಮ್ ಅಮ್ಲ 23 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 40 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಹಾಗೂ ಜೆಪಿ ಡುಮಿನಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ 23 ಎಸೆತಗಳಲ್ಲಿ 38 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕವನ್ನು ಸರಣಿಯಲ್ಲಿ ಸತತ 4ನೇ ಪಂದ್ಯ ಗೆಲ್ಲುವತ್ತ ಮುನ್ನಡೆಸಿದ್ದರು.

ಆದರೆ, ಶನಕ ಅವರು ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಡುಮಿನಿ ಅವರನ್ನು ನೇರ ಎಸೆತದಿಂದ ರನೌಟ್ ಮಾಡಿದರು. ಆಕರ್ಷಕ ಕ್ಯಾಚ್ ಪಡೆದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅವರು ಹೆನ್ರಿಕ್ ಕ್ಲಾಸೆನ್‌ರನ್ನು (17)ಪೆವಿಲಿಯನ್‌ಗೆ ಕಳುಹಿಸಿದರು.

ಧನಂಜಯ ಡಿಸಿಲ್ವಾರ ಚಿತ್ತಾಕರ್ಷಕ ಡೈವಿಂಗ್ ಕ್ಯಾಚ್‌ಗೆ ಮುಲ್ಡರ್ ಬಲಿಯಾದರು. ಮುಲ್ಲರ್ 21 ರನ್‌ಗೆ ಔಟಾದ ಬಳಿಕ ದಕ್ಷಿಣ ಆಫ್ರಿಕದ ಬ್ಯಾಟಿಂಗ್ ಸೊರಗಿತು. ಉಭಯ ತಂಡಗಳು ರವಿವಾರ ಕೊಲಂಬೊದಲ್ಲಿ ಐದನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News