ಮುಸ್ಲಿಮರನ್ನು ನಾಯಿಮರಿಗೆ ಹೋಲಿಸಿದ್ದ ವ್ಯಕ್ತಿ ಪ್ರಧಾನಿಯಾಗಬಹುದೆಂದು ಎಣಿಸಿರಲಿಲ್ಲ: ಮಣಿಶಂಕರ್ ಅಯ್ಯರ್

Update: 2018-08-11 13:19 GMT

ಹೊಸದಿಲ್ಲಿ, ಆ.11: “ಮುಸ್ಲಿಮರನ್ನು ನಾಯಿ ಮರಿಗೆ ಹೋಲಿಸಿದ ಯಾವುದೇ ವ್ಯಕ್ತಿ ಭಾರತದ ಪ್ರಧಾನಿಯಾಗಬಹುದೆಂದು ನಾನು ಯಾವತ್ತೂ ಊಹಿಸಿರಲಿಲ್ಲ'' ಎಂದು ಉಚ್ಛಾಟಿತ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ರಾಜಧಾನಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ `ಇನಫ್ ವಿದ್ ಇನ್‍  ಟಾಲರೆನ್ಸ್ ನ್ಯಾಷನಲ್ ಕ್ಯಾಂಪೇನ್' ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, “ಮುಖ್ಯಮಂತ್ರಿಯೊಬ್ಬರು ಮುಸ್ಲಿಮರನ್ನು ನಾಯಿಮರಿ ಎಂದು ತಿಳಿಯುತ್ತಾರೆಂದು 2014ರ ಮೊದಲು ನಾನು ಊಹಿಸಿರಲೇ ಇಲ್ಲ. 2002ರಲ್ಲಿ ಇಷ್ಟೊಂದು ಮುಸ್ಲಿಮರು ಪ್ರಾಣ ಕಳೆದುಕೊಂಡಿರುವ ಬಗ್ಗೆ ವಿಷಾದವಿದೆಯೇ ಎಂದು ಕೇಳಿದಾಗ ಆ ವ್ಯಕ್ತಿ, ನಾಯಿ ಮರಿ ಕೂಡ ನನ್ನ ಕಾರಿನಡಿ ಬಂದರೆ ನನಗೆ ನೋವಾಗುತ್ತದೆ ಎಂದು  ಹೇಳಿದ್ದರು. ಅವರು 24 ದಿನಗಳ ಕಾಲ ಯಾವುದೇ ಮುಸ್ಲಿಂ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿರಲಿಲ್ಲ. ಆಗಿನ ಪ್ರಧಾನಿ ವಾಜಪೇಯಿ ಬಂದಾಗ ಮಾತ್ರ ಅವರು ಅಹ್ಮದಾಬಾದ್ ನ ಶಾ ಆಲಂ ಮಸೀದಿಗೆ ಬಂದಿದ್ದರು, ಅದು ಶಿಷ್ಟಾಚಾರದಂತೆ ಅಗತ್ಯವೂ ಆಗಿತ್ತು. ಇಂತಹ ಒಬ್ಬ ವ್ಯಕ್ತಿ ಪ್ರಧಾನಿಯಾಗುತ್ತಾನೆಂದು ನಾನು ಎಣಿಸಿರಲಿಲ್ಲ,'' ಎಂದರು ಅಯ್ಯರ್.

“ನಮ್ಮ ಪ್ರಥಮ ಪ್ರಧಾನಿ ನೆಹರೂ ಅವರು ರಾಷ್ಟ್ರೀಯವಾದದ ನಿಜವಾದ ಅರ್ಥ ಕಲಿಸಿದ್ದರು. ಬಹುಸಂಖ್ಯಾತ ಕೋಮುವಾದವು ಅಲ್ಪಸಂಖ್ಯಾತ ಕೋಮುವಾದಕ್ಕಿಂತ ಕೆಟ್ಟದ್ದು ಎಂದು ಅವರಿಂದ ಕಲಿತೆ'' ಎಂದರು ಅಯ್ಯರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News