ಪಶ್ಚಿಮಬಂಗಾಳದಲ್ಲಿ ಟಿಎಂಸಿಯನ್ನು ಬುಡಮೇಲು ಮಾಡಲಿದ್ದೇವೆ: ಅಮಿತ್ ಶಾ

Update: 2018-08-11 13:23 GMT

ಹೊಸದಿಲ್ಲಿ, ಆ. 11: ಪಶ್ಚಿಮಬಂಗಾಳದಲ್ಲಿ ಬಿಜೆಪಿ ತೃಣಮೂಲ ಕಾಂಗ್ರೆಸ್ ಅನ್ನು ಬುಡಮೇಲೆ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಬಿಜೆಪಿ ಯುವ ಮೋರ್ಚಾ ಮೇಯೋ ರಸ್ತೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

 ‘‘ನಾವು ಇಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಬುಡಮೇಲು ಮಾಡಲಿದ್ದೇವೆ. ನಾವು ಪಶ್ಚಿಮಬಂಗಾಳದ ವಿರೋಧಿಗಳಲ್ಲ. ಆದರೆ, ಖಚಿತವಾಗಿ ಮಮತಾ ಬ್ಯಾನರ್ಜಿ ವಿರೋಧಿಗಳು. ನಾನಿಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇನೆ’’ ಎಂದು ಅವರು ಹೇಳಿದರು. ರ್ಯಾಲಿ ನಡೆಯುವ ಕೆಲವು ನಿಮಿಷಗಳ ಮೊದಲು ಅಮಿತ್ ಶಾ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಮಾತ್ರ 42 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಇದು ಗಣನೀಯವಾಗಿ ಏರಿಕೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಿಡ್ನಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ್ಯಾಲಿ ಉದ್ದೇಶಿಸಿ ಮಾತನಾಡಿದ ಒಂದು ತಿಂಗಳ ಬಳಿಕ ಶಾ ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಇಂದು ಬೆಳಗ್ಗೆ ಶಾ ಅವರು ಕೋಲ್ಕತ್ತಾಕ್ಕೆ ಆಗಮಿಸುತ್ತಿದ್ದಂತೆ ಸಂಗೀತದ ಸ್ವಾಗತ ಹಾಗೂ ಗದ್ದಲದ ಪ್ರತಿಭಟನೆ ನಡೆಯಿತು. ಇದರಿಂದ ಕೋಲ್ಕತ್ತಾ ವಿಮಾನ ನಿಲ್ದಾಣ ಕೇಸರಿ ಪಡೆ ಹಾಗೂ ತೃಣಮೂಲ ಕಾಂಗ್ರೆಸ್‌ನ ಬೆಂಬಲಿಗರ ಪೈಪೋಟಿಯ ಕಣವಾಯಿತು.

ಬಿಜೆಪಿ ಕಾರ್ಯಕರ್ತರು ಸಾಂಪ್ರದಾಯಿಕ ಕೀರ್ತನ, ಖೋಲ್, ಕರ್ಟಾಲ್ಸ್ ಮೂಲಕ ತಮ್ಮ ನಾಯಕನನ್ನು ಸ್ವಾಗತಿಸಿದರು. ಶಾ ಅವರ ಮುಖವಾಡ ಧರಿಸಿದ್ದ ಟಿಎಂಸಿ ಕಾರ್ಯಕರ್ತರು ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ರಿಜಿಸ್ಟ್ರಿಯನ್ನು ಟೀಕಿಸುವ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News