ಪ್ರಯಾಣಿಕರ ಮೇಲೆ ಅನಗತ್ಯ ದಂಡ ಬೇಡ

Update: 2018-08-12 18:16 GMT

ಮಾನ್ಯರೇ,

ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ನಿರ್ವಹಿಸುತ್ತಿರುವ ಕೆಲಸ ಮಹತ್ತರವಾದುದು. ಇದಕ್ಕೆ ಪೂರಕ ಎನ್ನುವಂತೆ ಬೆಂಗಳೂರು ಮಹಾನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸಹ ಸಾರಿಗೆ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಪೂರಕ ಸೇವೆ ಸಲ್ಲಿಸುತ್ತಿದೆ. ಈ ಮಹಾನಗರದಲ್ಲಿ ಸುಮಾರು ಆರುವರೆ ಸಾವಿರ ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಸಾರ್ವಜನಿಕರಿಗೆ ಮಾಸಿಕ ಹಾಗೂ ದೈನಂದಿನ ಬಸ್‌ಪಾಸನ್ನು ನೀಡಲಾಗುತ್ತಿದೆ.

ಪ್ರಸ್ತುತ ಒಂದು ದಿನದ ಬಸ್‌ಪಾಸ್ ದರ 70 ರೂ. ಇದ್ದು, ಪಾಸಿನ ಜೊತೆಗೆ ಪ್ರಯಾಣಿಕನು ತನ್ನ ಭಾವಚಿತ್ರ ಹೊಂದಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಅಲ್ಲದೆ ಪಾಸ್‌ನಲ್ಲಿ ಪ್ರಯಾಣಿಕನ ಕಡ್ಡಾಯವಾಗಿ ಸಹಿ ಮಾಡಬೇಕು ಎಂಬ ಸೂಚನೆಯನ್ನು ನೀಡಲಾಗಿದೆ. ಹೀಗಿದ್ದಾಗ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕ ಏಕದಿನ ಪಾಸ್‌ಗೆ ಸಹಿ ಮಾಡಿ ಪ್ರಯಾಣಿಸುತ್ತಿದ್ದಾಗ ಚೆಕಿಂಗ್‌ಗೆ ಬಂದ ಅಧಿಕಾರಿ ಗುರುತಿನ ಚೀಟಿಯಲ್ಲಿನ ಸಂಖ್ಯೆಯನ್ನು ಲಗತ್ತಿಸಿಲ್ಲ ಎಂಬ ಕಾರಣಕ್ಕೆ ಅನಗತ್ಯ ದಂಡ ವಿಧಿಸಿದ ಅಮಾನುಷ ಕೃತ್ಯ ಜಯನಗರದ ಲಾಲ್‌ಬಾಗ್‌ನ ಬಳಿ ಇತ್ತೀಚೆಗೆ ನಡೆದಿದೆ. ಏಕದಿನ ಬಸ್‌ಪಾಸ್‌ನ ಹಿಂಭಾಗದಲ್ಲಿ ಭಾವಚಿತ್ರವಿರುವ ಗುರುತಿನ ಚೀಟಯನ್ನು ಹೊಂದಿರಬೇಕೇ ವಿನಃ ಗುರುತಿನ ಚೀಟಿ ಸಂಖ್ಯೆಯನ್ನು ಬಸ್‌ಪಾಸ್‌ಗೆ ನಮೂದಿಸಬೇಕು ಎಂಬ ಸೂಚನೆಯನ್ನು ನೀಡಿಲ್ಲ. ಈ ಬಗ್ಗೆ ಸರಕಾರವು ಬಿಎಂಟಿಸಿ ಆಡಳಿತ ಮಂಡಳಿಗೆ ಏಕದಿನ ಬಸ್‌ಪಾಸ್ ಪಡೆಯುವ ಪ್ರಯಾಣಿಕರಿಗೆ ಪ್ರಸ್ತುತ ಸಹಿ ಮಾಡುವ ನಿಯಮವಷ್ಟೇ ಮುಂದುವರಿಸುವಂತೆ ಆದೇಶಿಸಬೇಕು. ಅಲ್ಲದೆ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸದ ಕಾರಣಕ್ಕೆ ದೂರದಿಂದ ಬರುವ ಹಳ್ಳಿಜನರ ಮೇಲೆ ಏಕಾಏಕಿ ದಂಡ ವಿಧಿಸುವಂತಹ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು

 ಬಿ.ಜೆ ವಿನಯಾದಿತ್ಯ, ಬಿ.ಆರ್.ಪ್ರಾಜೆಕ್ಟ್, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News