×
Ad

ಪುಣೆಯ ಸಹಕಾರಿ ಬ್ಯಾಂಕಿಗೆ ಸೈಬರ್ ದಾಳಿ: 94 ಕೋ.ರೂ.ದೋಚಿದ ಹ್ಯಾಕರ್‌ಗಳು

Update: 2018-08-14 17:04 IST

ಪುಣೆ,ಆ.14: ಸೈಬರ್ ದಾಳಿಯ ಶಂಕಿತ ಪ್ರಕರಣವೊಂದರಲ್ಲಿ ಪುಣೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಾಸ್ಮಾಸ್ ಬ್ಯಾಂಕಿನ ಸರ್ವರ್‌ಗೆ ಕನ್ನ ಹಾಕಿರುವ ಹ್ಯಾಕರ್‌ಗಳು 94 ಕೋ.ರೂ.ಗೂ ಅಧಿಕ ಹಣವನ್ನು ಲಪಟಾಯಿಸಿ ಅದನ್ನು ದೇಶದ ಹೊರಗಿನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಇಲ್ಲಿಯ ಚತುಶೃಂಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾರೆ.

 ನಗರದ ಗಣೇಶಖಿಂಡ್ ರಸ್ತೆಯಲ್ಲಿರುವ ಕೇಂದ್ರ ಕಚೇರಿಯಲ್ಲಿನ ಎಟಿಎಂ ಸ್ವಿಚ್‌ನ ಮೇಲೆ ಮಾಲ್‌ವೇರ್ ದಾಳಿ ನಡೆದಿದೆ ಎಂದು ಬ್ಯಾಂಕಿನ ಅಧಿಕಾರಿಗಳು ದೂರಿನಲ್ಲಿ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ 14,849 ಡೆಬಿಟ್ ಕಾರ್ಡ್ ವಹಿವಾಟುಗಳ ಮೂಲಕ 80.5 ಕೋ.ರೂ.ಗಳನ್ನು ಮತ್ತು ನಂತರ 13.9 ಕೋ.ರೂ.ಗಳನ್ನು ಸ್ವಿಫ್ಟ್ ವಹಿವಾಟಿನ ಮೂಲಕ ವಿದೇಶಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆ.11 ಮತ್ತು ಆ.13ರಂದು ಈ ವರ್ಗಾವಣೆಗಳು ನಡೆದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಾಲವೇರ್ ದಾಳಿಯ ಮೂಲಕ ಸಾವಿರಾರು ಡೆಬಿಟ್ ಕಾರ್ಡ್‌ಗಳ ಮಾಹಿತಿಗಳನ್ನು ಕಳವು ಮಾಡಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.

1906ರಲ್ಲಿ ಸ್ಥಾಪನೆಗೊಂಡ ಕಾಸ್ಮಾಸ್ ಭಾರತದಲ್ಲಿಯ ಅತ್ಯಂತ ಹಳೆಯ ಸಹಕಾರಿ ಬ್ಯಾಂಕುಗಳಲ್ಲೊಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News