ಎನ್‌ಆರ್‌ಸಿ ಅಸ್ಸಾಂ ಅನ್ನು ಅಕ್ರಮ ವಿದೇಶಿಗರಿಂದ ಮುಕ್ತಗೊಳಿಸಲಿದೆ: ಸಿಎಂ ಸೊನೊವಾಲ್

Update: 2018-08-15 15:39 GMT

ಗುವಹಾಟಿ, ಆ.15: ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯು ಅಸ್ಸಾಂ ಅನ್ನು ಅಕ್ರಮ ವಿದೇಶಿಗರಿಂದ ಮುಕ್ತಗೊಳಿಸಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಬುಧವಾರ ತಿಳಿಸಿದ್ದಾರೆ. ಈ ಪಟ್ಟಿಯಿಂದ ಭಾರತದ ನೈಜ ನಾಗರಿಕರ ಹೆಸರುಗಳು ಬಿಟ್ಟುಹೋಗದಂತೆ ಮತ್ತು ನಮ್ಮ ನೆಲದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಹೆಸರುಗಳು ಸೇರಿಕೊಳ್ಳದಂತೆ ತನ್ನ ಸರಕಾರ ಖಚಿತಪಡಿಸಿಕೊಳ್ಳಲಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಇಲ್ಲಿನ ಖನಪರದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸೊನೊವಾಲ್ ಈ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಮುಂದೆ ಹೊಸದಾಗಿ ಗಡಿಯಾಚೆಯಿಂದ ನುಸುಳುಕೋರರು ದೇಶವನ್ನು ಪ್ರವೇಶಿಸದಂತೆ ಭಾರತ-ಬಾಂಗ್ಲಾದೇಶ ಗಡಿಯನ್ನು ಮುಚ್ಚಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸೊನೊವಾಲ್ ತಿಳಿಸಿದ್ದಾರೆ. ಇದೇ ವೇಳೆ ಎನ್‌ಆರ್‌ಸಿ ವರದಿಯನ್ನು ಸಲ್ಲಿಸಲು ಪ್ರಮಾಣಿಕ ಪ್ರಯತ್ನ ನಡೆಸಿದ 55,000 ಸರಕಾರಿ ಸಿಬ್ಬಂದಿ ಹಾಗೂ ಈ ವರದಿಯನ್ನು ಪ್ರಕಟಿಸುವ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿದ್ದ 70,000 ಪೊಲೀಸ್ ಸಿಬ್ಬಂದಿಯ ಕರ್ತವ್ಯಪರತೆಯನ್ನು ಸೊನೊವಾಲ್ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News