ಪತ್ನಿಯ ಚಿಕಿತ್ಸೆಗಾಗಿ 4 ವರ್ಷದ ಪುತ್ರಿಯನ್ನು ಮಾರಲು ಮುಂದಾದ ಪತಿ !

Update: 2018-08-31 14:57 GMT

ಕನೌಜ, ಆ. 31: ವ್ಯಕ್ತಿಯೋರ್ವ ತನ್ನ ಗರ್ಭಿಣಿ ಪತ್ನಿಗೆ ಚಿಕಿತ್ಸೆ ಕೊಡಿಸಲು ಹಣಕ್ಕಾಗಿ ನಾಲ್ಕು ವರ್ಷದ ಪುತ್ರಿಯನ್ನು ಮಾರಲು ಯತ್ನಿಸಿದಾಗ ಉತ್ತರಪ್ರದೇಶದ ಪೊಲೀಸರು ಮಧ್ಯಪ್ರವೇಶಿಸಿ ತಡೆದಿದ್ದಾರೆ.

ಕನೌಜದ ನಿವಾಸಿ ಅರವಿಂದ ಬಂಜಾರ ತನ್ನ 7 ತಿಂಗಳ ಗರ್ಭಿಣಿ ಪತ್ನಿ ಸುಖ್‌ದೇವಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಚಿಕಿತ್ಸೆ ನೀಡಲು ರಕ್ತದ ಏರ್ಪಾಡು ಮಾಡುವಂತೆ ವೈದ್ಯರು ಬಂಜಾರಗೆ ತಿಳಿಸಿದ್ದರು. ಆದರೆ, ಹಣ ಇಲ್ಲದ ಅರವಿಂದ ತನ್ನ ಪುತ್ರಿಯನ್ನು 25 ಸಾವಿರ ರೂಪಾಯಿಗೆ ಮಾರಲು ಪ್ರಯತ್ನಿಸಿದ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ 4 ವರ್ಷದ ಪುತ್ರಿ ರೋಶ್ನಿ ಹಾಗೂ 1 ವರ್ಷದ ಪುತ್ರ ಜಾನು ಇದ್ದಾರೆ. ‘‘ಆಕೆಗೆ ಚಿಕಿತ್ಸೆ ನೀಡಲು ರಕ್ತ ತರುವಂತೆ ಜಿಲ್ಲಾಸ್ಪತ್ರೆಯ ವೈದ್ಯರು ನಮಗೆ ತಿಳಿಸಿದ್ದರು. ರಕ್ತ ನೀಡದೇ ಇದ್ದರೆ ಸುಖ್‌ದೇವಿ ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ನನ್ನಲ್ಲಿ ಹಣವಿರಲಿಲ್ಲ. ನನಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಆದುದರಿಂದ ಮಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ’’ ಎಂದು ಬಂಜಾರ ತಿಳಿಸಿದ್ದಾರೆ.

‘‘ಮಗು ಮಾರಾಟ ಮಾಡುವುದು ಅಷ್ಟು ಸುಲಭವಲ್ಲ. ಆದರೆ, ನಮಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ನಾವು ಈಗಾಗಲೇ ಹಲವು ಆಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದೆವು’’ ಎಂದು ಸುಖ್ ದೇವಿ ತಿಳಿಸಿದ್ದಾರೆ. ಈ ವಿವರ ಕೇಳಿದ ಪೊಲೀಸರು ದಂಪತಿ ಮಗು ಮಾರಾಟ ಮಾಡುವುದನ್ನು ತಡೆದಿದ್ದಾರೆ ಹಾಗೂ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News